ಬೆಂಗಳೂರು: ಸೋಮವಾರ ಸಿಲಿಕಾನ್ ಸಿಟಿಯಲ್ಲಿ ಸುತ್ತಾಡೋಕೆ ನೀವೇನಾದ್ರೂ ಪ್ಲಾನ್ ಮಾಡಿದ್ರೆ, ಸರ್ಕಾರಿ ಬಸ್ ಅಥವಾ ನಿಮ್ಮ ಸ್ವಂತ ವೆಹಿಕಲ್ ಅರೆಂಜ್ ಮಾಡಿಕೊಳ್ಳೋದು ಬೆಸ್ಟ್. ಅವತ್ತು ಏನಾದ್ರೂ ಆಟೋ, ಟ್ಯಾಕ್ಸಿ ಅಂತಾ ನಂಬಿಕೊಂಡು ರಸ್ತೆಗೆ ಎಂಟ್ರಿ ಕೊಟ್ಟರೇ ಖಂಡಿತಾ ನಿಮಗೆ ಆಟೋ, ಟ್ಯಾಕ್ಸಿ ಸಿಗೋದು ಡೌಟೇ.
ಏರ್ಪೋರ್ಟ್ ನಿಂದಲೂ ನಿಮಗೆ ಟ್ಯಾಕ್ಸಿ ಸಿಗಲ್ಲ. ಯಾಕೆಂದ್ರೆ ಸೋಮವಾರ ಸರ್ಕಾರದ ವಿರುದ್ದ ಖಾಸಗಿ ಸಾರಿಗೆ ಮಾಲೀಕರು ಬೀಗಿಳಿಯುತ್ತಿದ್ದಾರೆ. ಹಾಗಾದ್ರೆ ಸೋಮವಾರ ನಗರದಲ್ಲಿ ಏನಿರುತ್ತೆ ಏನಿರಲ್ಲ. ಮುಷ್ಕರಕ್ಕೆ ಸಿದ್ದತೆ ಹೇಗಿದೆ ಅನ್ನೋ ರಿಪೋರ್ಟ್ ಇಲ್ಲಿದೆ..
ಬೆಂಗಳೂರಿನಲ್ಲಿ ಬಿಎಂಟಿಸಿ ಮೆಟ್ರೋ ಸಂಚಾರ ಇದ್ರೂ ಲಕ್ಷಾಂತರ ಜನ ಖಾಸಗಿ ಸಾರಿಗೆ ವಾಹನಗಳನ್ನ ನಂಬಿಕೊಂಡು ಮನೆಯಿಂದ ಹೊರಗಡೆ ಬರ್ತಾರೆ. ಆದ್ರೆ ಸೋಮವಾರ ಖಾಸಗಿ ಸಾರಿಗೆ ಸೇವೆಯನ್ನ ನೆಚ್ಚಿಕೊಂಡು ಹೊರಗಡೆ ಬರೋ ಮುನ್ನ ಯೋಚನೆ ಮಾಡಬೇಕಿದೆ. ಹೌದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಮಾಲೀಕರು, ಚಾಲಕರು ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯಾಗಿರೋ ಶಕ್ತಿ ಯೋಜನೆಯನ್ನ ಖಂಡಿಸುತ್ತಿದ್ದಾರೆ.ಹೀಗಾಗಿ ಸರ್ಕಾರದ ವಿರುದ್ದ ಸಿಡಿದೆದ್ದು, ಭಾನುವಾರ ಮಧ್ಯರಾತ್ರಿಯಿಂದ್ಲೇ ಬೆಂಗಳೂರು ನಗರದಲ್ಲಿ ಆಟೋ, ಟ್ಯಾಕ್ಸಿ,ಖಾಸಗಿ ಬಸ್ ಹಾಗೂ ಸ್ಕೂಲ್ ಬಸ್ ನಿಲ್ಲಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಬಂದ್ ದಿನ ಏನಿದೆ, ಏನಿಲ್ಲ?
32 ಸಂಘಟನೆಗಳ 7 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರ ನಿಲ್ಲಿಸಲಿವೆ. ಏರ್ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಓಲಾ, ಊಬರ್ ಆಟೋ ಟ್ಯಾಕ್ಸಿ ಬಂದ್ ಆಗಲಿದೆ. ಕಾರ್ಪೋರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್ಗಳು ಕೂಡ ಬಂದ್ಗೆ ಬೆಂಬಲ ನೀಡಿದ್ದು ಸಂಚಾರ ಸ್ಥಗಿತಗೊಳಿಸಲಿವೆ.
ಖಾಸಗಿ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುವವರಿಗೂ ಬಂದ್ ಬಿಸಿ ತಟ್ಟಲಿದೆ. ಗೂಡ್ಸ್ ವಾಹನಗಳು ಬಂದ್ ಆಗುವ ಸಾಧ್ಯತೆ ಇದೆ.
ನಗರದಲ್ಲಿ 3 ಲಕ್ಷ ಆಟೋ (Auto), 1.5 ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ ಮತ್ತು ಕಾರ್ಪೋರೇಟ್ ಕಂಪನಿಯ ಬಸ್ಗಳು ಸೇವೆಯಿಂದ ಹೊರಗುಳಿಯಲಿವೆ. ಒಟ್ಟು 5 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರವನ್ನು ನಿಲ್ಲಿಸಲಿವೆ. ಅಲ್ಲದೇ ಹೋಟೆಲ್ ಮಾಲೀಕರ ಸಂಘದ ಬಳಿಯೂ ಬಂದ್ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಗಿದ್ದು ಹೋಟೆಲ್ಗಳು ಬಂದ್ ಆಗುವ ಸಾಧ್ಯತೆ ಇದೆ. ಇದರೊಂದಿಗೆ ವರ್ತಕರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳೊಂದಿಗೆ ಬಂದ್ಗೆ ಬೆಂಬಲಿಸುವಂತೆ ಕೇಳಿಕೊಳ್ಳಲಾಗಿದೆ.