ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ ಪ್ರಿಯಕರನೇ ತಾನು ಪ್ರೀತಿಸಿದ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು ನಾಪತ್ತೆಯಾಗಿರುವ ಘಟನೆ ಜರುಗಿದೆ. ಅರ್ಪಿತ್ ಪ್ರಿಯತಮೆಯನ್ನೇ ಕೊಂದ ಆರೋಪಿ ಎಂದು ಗುರುತಿಸಲಾಗಿದೆ. ಅರ್ಪಿತ್ ಹಾಗೂ ಆಕಾಂಕ್ಷಾ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಪರಸ್ಪರ ಪ್ರೀತಿಸುತ್ತಿದ್ದರು. ಜೀವನ್ ಭೀಮಾನಗರದಲ್ಲಿ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಇತ್ತೀಚೆಗೆ ಇಬ್ಬರೂ ಕೆಲಸ ಬದಲಾಯಿಸಿ ಬೇರೆ ಬೇರೆ ಕಂಪನಿಗೆ ಸೇರಿದ್ದರು. ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತು. ನಿನ್ನೆ ಕೂಡ ಇಬ್ಬರ ನಡುವೆ ಜಗಳವಾಗಿ ಗಲಾಟೆ ವಿಕೋಪಕ್ಕೆ ತಿರುಗಿದೆ. ಅರ್ಪಿತ್, ಆಕಾಂಕ್ಷಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬಟ್ಟೆಯಿಂದ ಕಟ್ಟಿ ಪ್ಯಾನ್ ಗೆ ಕಟ್ಟಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗದೇ ಶವವನ್ನು ನೆಲದ ಮೇಲೆ ಮಲಗಿಸಿ ಪರಾರಿಯಾಗಿದ್ದಾನೆ. ಕೆಲಸಕ್ಕೆ ಹೋಗಿದ್ದ ಇನ್ನೋರ್ವ ರೂಮ್ ಮೇಟ್ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.