ನವದೆಹಲಿ: ಕರ್ನಾಟಕ ರಾಜ್ಯವು ಕ್ರಿಮಿನಲ್ಗಳಿಗೆ ‘ಸುರಕ್ಷಿತ ಸ್ವರ್ಗ’ ಆಗುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ಧಾರೆ. ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿ ಹತ್ಯೆ ಪ್ರಕರಣ ಪ್ರಸ್ತಾಪಿಸಿ ಮಾತನಾಡಿದ ರಾಜೀವ್ ಚಂದ್ರಶೇಖರ್, ಕೋಮು ಸಾಮರಸ್ಯ ಕದಡುವ ಶಕ್ತಿಗಳಿಗೆ ಕರ್ನಾಟಕವು ಸುರಕ್ಷಿತ ಸ್ವರ್ಗವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಜೈನ ಮುನಿ ಹತ್ಯೆ ವಿಚಾರವಾಗಿ ಬಿಜೆಪಿ ನಿರಂತರ ಪ್ರತಿಭಟನೆ ಮಾಡಿದ ಬಳಿಕವಷ್ಟೇ ಕರ್ನಾಟಕ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾದರು ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಕರ್ನಾಟಕ ರಾಜ್ಯವು ಕೋಮು ಸಾಮರಸ್ಯ ಕದಡುವ ಕ್ರಿಮಿನಲ್ಗಳಿಗೆ ಸುರಕ್ಷಿತ ಸ್ವರ್ಗವಾಗಿ ಪರಿಣಮಿಸಿದೆ. ಜೈನ ಮುನಿಗಳ ಭೀಕರ ಹತ್ಯೆ ಪ್ರಕರಣವು ಆಘಾತಕಾರಿಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಜೈನ ಮುನಿಗಳ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಕರ್ನಾಟಕ ಬಿಜೆಪಿ ಘಟಕವು ನಿರಂತರ ಪ್ರತಿಭಟನೆಗಳನ್ನು ನಡೆಸಿತು. ಈ ಪ್ರತಿಭಟನೆಗಳ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆಯು ಕಾರ್ಯಾಚರಣೆಗೆ ಇಳಿಯಿತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗಿತ್ತು. ಆದರೆ, ಈಗ ಏನಾಗ್ತಿದೆ ಎಂದು ನಾವು ಪ್ರಶ್ನೆ ಕೇಳಲೇ ಬೇಕಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.