ಬರ ಇದ್ದರೂ ಸಾಲ ಕಟ್ಟಲು ಬ್ಯಾಂಕು ನೋಟಿಸ್‌: ಕಂಗಾಲಾದ ರೈತ

ಧಾರವಾಡ;- ಬರಗಾಲದಿಂದ ತತ್ತರಿಸಿರುವ ರೈತರಿಗೆ ಇದೀಗ ಶಾಕ್ ಎದುರಾಗಿದ್ದು, ಬೆಳೆಸಾಲ ತುಂಬುವಂತೆ ಬ್ಯಾಂಕ್‌ ಗಳಿಂದ ನೋಟಿಸ್‌ ಬರುತ್ತಿದೆ. ಇನ್ನೂ ಇಂತಹದೊಂದು ನೋಟಿಸ್‌ಗೆ ನವಲಗುಂದ ತಾಲೂಕಿನ ರೈತನೋರ್ವ ಭಯಗೊಂಡು ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿಯುವಂತಾಗಿದೆ.

ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ರೈತ ಮಹಾದೇವಪ್ಪ ಜಾವೂರು ಎಂಬುವರು ತಮ್ಮ 19 ಎಕರೆ ಹೊಲದ ಮೇಲೆ ಬೆಳೆ ಸಾಲ ತೆಗೆದುಕೊಂಡಿದ್ದಾರೆ. ಅವರಿಗೀಗ ಬ್ಯಾಂಕ್‌ನಿಂದ ನೋಟಿಸ್‌ ಬಂದಿದೆ. ಮೊರಬ ಗ್ರಾಮದಲ್ಲಿರುವ ಬ್ಯಾಂಕ್‌ನಿಂದ ನೋಟಿಸ್‌ ಬಂದಿದೆ.

2017ರಲ್ಲಿ ₹14.50 ಲಕ್ಷ ಬೆಳೆಸಾಲ ತೆಗೆದುಕೊಂಡಿದ್ದು, ಈ ಸಾಲ ಇದೀಗ ₹34.50 ಲಕ್ಷಕ್ಕೆ ಏರಿಕೆಯಾಗಿದೆ. ಜತೆಗೆ ಬ್ಯಾಂಕಿನ ನಿಯಮಾವಳಿಯಂತೆ ಲಭ್ಯವಿರುವ ಏಕಕಂತು ಸಾಲ ಪರಿಹಾರ ಯೋಜನೆ ಮೂಲಕ ಸಾಲ ತೀರಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಇದೂ ಆಗದೇ ಹೋದಲ್ಲಿ ನಿಯಮಾವಳಿ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವುದಾಗಿ ಬ್ಯಾಂಕ್‌ ತನ್ನ ನೋಟಿಸ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ.

ಏತನ್ಮಧ್ಯೆ ಮಹಾದೇವಪ್ಪ ಅವರ ಪುತ್ರ ಷಣ್ಮುಖ ಜಾವೂರ ಅವರು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಬ್ಯಾಂಕ್‌ ಸಿಬ್ಬಂದಿ ಕಡ್ಡಾಯವಾಗಿ ಸಾಲ ತುಂಬಲು ಒತ್ತಾಯಿಸುತ್ತಿದ್ದಾರೆ. ತಂದೆಯವರು ಇದನ್ನು ಕೇಳಿ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಸದ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ ತಂದೆಗೆ ಪ್ರಜ್ಞೆ ಬಂದಿಲ್ಲ. ಈಗಾಗಲೇ ₹3 ಲಕ್ಷ ವೆಚ್ಚ ಮಾಡಿದ್ದೇನೆ. ತಂದೆಯವರು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಇತ್ತ ಬ್ಯಾಂಕ್‌ನವರು ಹಣ ತುಂಬಲು ತಾಕೀತು ಮಾಡುತ್ತಿದ್ದಾರೆ. ಆದ್ದರಿಂದ ತಾವು ಮಧ್ಯೆ ಪ್ರವೇಶಿಸಿ ಸಾಲ ಮನ್ನಾ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Loading

Leave a Reply

Your email address will not be published. Required fields are marked *