ಮಳೆ ತೀವ್ರ ಕೊರತೆ ಕಾರಣ ಬಯಲು ಭಾಗದ ಜನರ ಬದುಕಿನಾಶ್ರಯದ ಈರುಳ್ಳಿ, ಆಲೂಗೆಡ್ಡೆ ಬೆಳೆ ಸಂಪೂರ್ಣ ಕೈಕೊಟ್ಟಿದ್ದು, ರೈತರು, ಕೂಲಿ ಕಾರ್ಮಿಕರ ಮುಖದಲ್ಲಿ ಚಿಂತೆಯ ಕವಳ ಕಮರುವಂತೆ ಮಾಡಿದೆ
ಪಟ್ಟಣ ಹೊರವಲಯದ ಜಮೀನಿನಲ್ಲಿಈರುಳ್ಳಿ ಬೆಳೆದಿರುವ ರೈತ ಜಯಣ್ಣ ಹಾಗೂ ಬಳ್ಳಿಗನೂರು ಭಾಗದಲ್ಲಿಆಲೂಗೆಡ್ಡೆ ಬೆಳೆದಿರುವ ರೈತ ಬಾಲಕೃಷ್ಣ ತಿಳಿಸುವಂತೆ, ಒಂದು ಎಕರೆ ಬೆಳೆಗೆ ಕನಿಷ್ಟ ಎಂದರೂ ಕಳೆ, ಕುಂಟೆ, ನೇಗಿಲು ಹೊಡೆಸುವುದು, ಗೊಬ್ಬರ, ಔಷಧ ಸೇರಿದಂತೆ 30 ರಿಂದ 35 ಸಾವಿರ ರೂ.
ಖರ್ಚು ಬರುತ್ತದೆ
ಎಕರೆಗೆ ನೂರು ಚೀಲ ಬೆಳೆ ಬರುತ್ತಿತ್ತು. ಕೆ.ಜಿ.ಗೆ 10ರಿಂದ 15ರೂ ವರೆಗೆ ಮಾರುಕಟ್ಟೆ ದರ ದೊರಕುತ್ತಿತ್ತು. ಈ ಬಾರಿ ಬಿತ್ತಿದ್ದ ಬೀಜ ಹುಟ್ಟಿ ಬೆಳೆಯುವ ಮೊದಲೇ ಒಣಗಿದ್ದು, ನಯಾಪೈಸೆ ಆದಾಯವೂ ಸಿಗುವುದಿಲ್ಲ. ಬರ ಪರಿಹಾರಕ್ಕೆ ಸರಕಾರಗಳು ಸರ್ವೆ ನಡೆಸಿವೆಯಾದರೂ ಅವರು ಕೊಡುವ ಪರಿಹಾರ ಯಾವುದಕ್ಕೂ ಸಾಕಾಗದು ಎನ್ನುತ್ತಾರೆ.
ಕೂಲಿಕಾರ್ಮಿಕರಾದ ಜನಾರ್ದನ್, ಆನಂದ್, ಅರುಣ್ ತಿಳಿಸುವಂತೆ ಮಳೆ ಕೈಕೊಟ್ಟಿರುವುದರಿಂದ ನಮಗೆ ಕೂಲಿ ಕೆಲಸವೂ ಇಲ್ಲ. ಕೃಷಿ ಕೂಲಿಕಾರರ ಸ್ಥಿತಿ ಹೇಳತೀರದಾಗಿದೆ. ಕುಟುಂಬಗಳ ನಿರ್ವಹಣೆಗೆ ತೊಡಕಾಗಿದೆ ಎಂದಿದ್ದಾರೆ.
ಈರುಳ್ಳಿ ಮತ್ತು ಆಲೂಗೆಡ್ಡೆ ಬೆಳೆಯಲ್ಲಿಕಳೆ ತೆಗೆಯಲು ಹೋಗುತ್ತಿದ್ದ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಈರುಳ್ಳಿ ಕಳೆ, ಟೊಮೆಟೊ ಗುಜ್ಜು ನೆಡುವ ಕಾರ್ಯಕ್ಕೆ ಹೋಗುತ್ತಿದ್ದ ಮಹಿಳೆಯರು, ಎಳನೀರು ಕೀಳಲು ಹೋಗುತ್ತಿದ್ದ ಪುರುಷ ಕೂಲಿ ಕಾರ್ಮಿಕರು ನಿತ್ಯ ಕೆಲಸ ಸಿಗದೆ ಚಿಂತಾಕ್ರಾಂತರಾಗಿದ್ದಾರೆ.