ಇಸ್ಲಾಮಾಬಾದ್: ಕರಾಚಿಯಿಂದ (Karachi) ರಾಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್ಪ್ರೆಸ್ (Hazara Express) ರೈಲು ಭೀಕರ ದುರಂತಕ್ಕೀಡಾಗಿದೆ. ಘಟನೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 80 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ಕರಾಚಿಯಿಂದ 275 ಕಿಲೋ ಮೀಟರ್ ದೂರದಲ್ಲಿರುವ ರಾವಲ್ಪಿಂಡಿಗೆ (Rawalpindi) ತೆರಳುತ್ತಿದ್ದ ಹಜಾರಾ ಎಕ್ಸ್ಪ್ರೆಸ್ ರೈಲಿನ ಒಟ್ಟು 10 ಬೋಗಿಗಳು ಹಳಿ ತಪ್ಪಿದೆ. ಘಟನೆಯಲ್ಲಿ ಈವೆರೆಗೆ 20 ಮಂದಿ ಸಾವನ್ನಪ್ಪಿದ್ದು, 80 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದ್ರೆ ಘಟನೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.
ರೈಲ್ವೆ ಆಡಳಿತ ಮಂಡಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪಾಕಿಸ್ತಾನ ಸೇನೆ ಕೂಡ ಕಾರ್ಯಾಚರಣೆಗೆ ಕೈಜೋಡಿಸಿದ್ದು, ಸಮೀಪದ ನೆಲೆಗಳಿಂದ ಹೆಚ್ಚಿನ ಸೈನಿಕರನ್ನ ಕರೆಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಸಮೀಪದಲ್ಲಿರುವ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇತರ ಪ್ರಯಾಣಿಕರನ್ನ ನಿಗದಿತ ಸ್ಥಳಕ್ಕೆ ತಲುಪಿಸಲು ಪರ್ಯಾಯ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ಒಡಿಶಾ ರಾಜ್ಯದಲ್ಲಿ ನಡೆದ ಭೀಕರ ರೈಲು ದುರಂತ (Odisha Train Accident) ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಜೂನ್ 2ರ ಸಂಜೆ ಸರಕುಗಳ ರೈಲಿಗೆ ಡಿಕ್ಕಿ ಹೊಡೆದು ಅದರ ಹೆಚ್ಚಿನ ಕೋಚ್ಗಳು ಹಳಿತಪ್ಪಿದ್ದವು. ಈ ಅಪಘಾತದಲ್ಲಿ ಸುಮಾರು 288 ಮಂದಿ ಸಾವನ್ನಪ್ಪಿದ್ದರು ಅಲ್ಲದೇ 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪಾಕಿಸ್ತಾನದಲ್ಲಿ ಸಂಭವಿಸಿರುವ ದುರಂತದಲ್ಲಿ ಸಂತ್ರಸ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.