ಬೆಂಗಳೂರು : ನಮ್ಮ ಸರ್ಕಾರ ಅಧಿಕಾರದಲ್ಲಿದೆ ಎಂದು ಯಾವುದೇ ಕಾರಣಕ್ಕೂ ಮುಂದಿನ 5 ವರ್ಷ ನಾವೇ ಶಾಸಕರು ಎಂದು ಮೈ ಮರೆಯಬೇಡಿ. ನಮ್ಮ ಸರ್ಕಾರ ಸುಭದ್ರವಾಗಿದೆ. ಸರ್ಕಾರನ್ನು ಡಿಸ್ಟರ್ಬ್ ಮಾಡುವ ಪ್ರಯತ್ನ ನಡೆಯುತ್ತವೆ. ಇದರ ಬಗ್ಗೆ ನಿಮ್ಮ ಕಣ್ಣು,ಕಿವಿ ಚುರುಕಿರಬೇಕು. ನಿಮ್ಮನ್ನು ಬೇಕೇಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕೈ’ ಕಲಿಗಳಿಗೆ ಎಚ್ಚರಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಆಮೇಲೆ ಆ ಸುಳ್ಳನ್ನು ತಮ್ಮ ಪರಿವಾರದ ಮೂಲಕ ಹಬ್ಬಿಸುತ್ತಾರೆ. ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡ್ತಾರೆ. ಈ ಬಗ್ಗೆ ಎಚ್ಚರದಿಂದಿರಿ ಎಂದು ಹಿತವಚನ ಮಾಡಿದರು.
ನಮ್ಮ 5 ಗ್ಯಾರಂಟಿಗಳು ಎಲ್ಲಾ ಜಾತಿ, ಧರ್ಮ, ವರ್ಗಗಳ ಬದುಕಿಗೂ ಸ್ಪಂದಿಸಿವೆ. ಇದು ಬಿಜೆಪಿಗೆ ನಡುಕ ಹುಟ್ಟಿಸಿದೆ. ಹೀಗಾಗಿ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ವಿಪರೀತ ಸುಳ್ಳುಗಳನ್ನು, ನಕಲಿ ವಿಡಿಯೋಗಳನ್ನು ಸೃಷ್ಟಿಸುತ್ತಾರೆ. ಶಾಸಕರೊಬ್ಬರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ, ಸುದ್ದಿ ಮಾಡಿಸಿದ್ದು ಈ ಕುತಂತ್ರದ ಭಾಗವೇ ಆಗಿದೆ. ಈಗ ಶಾಸಕರೇ ಆ ಪತ್ರ ತಮ್ಮದಲ್ಲ ಎಂದು ಸ್ಪಷ್ಟನೆ ನೀಡಿದ್ದಾಗಿದೆ. ಆದ್ರೆ, ಸತ್ಯ ಏನು ಅಂತ ಗೊತ್ತಾಗುವಷ್ಟರಲ್ಲಿ ಅವ್ರು ಸುಳ್ಳನ್ನು ಹರಡಿದ್ದಾರೆ ಎಂದು ಗುಡುಗಿದರು.