AsiaCup: ಬಾಂಗ್ಲಾದೇಶದ ವಿರುದ್ಧ 5 ವಿಕೆಟ್ʼಗಳ ಜಯ ಸಾಧಿಸಿದ ಶ್ರೀಲಂಕಾ

ಕೊಲಂಬೊ: ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಶ್ರೀಲಂಕಾ (Sri Lanka) ತಂಡ ಮಂದಗತಿಯ ಬ್ಯಾಟಿಂಗ್‌ ಹೊರತಾಗಿಯೂ ಬಾಂಗ್ಲಾದೇಶದ (Bangladesh) ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಏಕದಿನ ಏಷ್ಯಾಕಪ್‌ (AsiaCup) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 42.4 ಓವರ್‌ಗಳಲ್ಲಿ 164 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ 39 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿ ಗೆಲುವು ಸಾಧಿಸಿತು.

ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ ತಂಡಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ಪಾತುಂ ನಿಸ್ಸಾಂಕ (14 ರನ್‌) ಹಾಗೂ ದಿಮುತ್ ಕರುಣಾರತ್ನೆ (1 ರನ್‌) ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಈ ಬೆನ್ನಲ್ಲೇ ಕುಸಲ್‌ ಮೆಂಡೀಸ್‌ ಸಹ 5 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ಸದೀರ ಸಮರವಿಕ್ರಮ, ಚರಿತ್ ಅಸಲಂಕ ಶತಕದ ಜೊತೆಯಾಟದಿಂದ ಗೆಲುವಿನ ಹಾದಿಯತ್ತ ಸಾಗಿತು.

4ನೇ ವಿಕೆಟ್‌ಗೆ ಈ ಜೋಡಿ 119 ರನ್‌ಗಳ ಜೊತೆಯಾಟ ನೀಡಿತು. ಸಮರವಿಕ್ರಮ 77 ಎಸೆತಗಳಲ್ಲಿ 56 ರನ್‌ ಗಳಿಸಿದ್ರೆ, ಅಸಲಂಕ 92 ಎಸೆತಗಳಲ್ಲಿ ಅಜೇಯ 62 ರನ್‌ (5 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಮಿಂಚಿದರು. ಕೊನೆಯಲ್ಲಿ ನಾಯಕ ದಸುನ್‌ ಶನಾಕ (Dasun Shanaka) 21 ಎಸೆತಗಳಲ್ಲಿ 14 ರನ್‌ ಗಳಿಸಿ ಜಯದ ದಡ ಮುಟ್ಟಿಸಿದರು.

ಬಾಂಗ್ಲಾ ಪರ ನಾಯಕ ಶಕೀಬ್ ಅಲ್ ಹಸನ್ 2 ವಿಕೆಟ್‌ ಕಿತ್ತರೆ, ತಸ್ಕಿನ್‌ ಅಹ್ಮದ್‌, ಶೋರಿಫುಲ್ ಇಸ್ಲಾಂ ಹಾಗೂ ಮೆಹದಿ ಹಸನ್‌ (Shakib Al Hasan) ತಲಾ ಒಂದೊಂದು ವಿಕೆಟ್‌ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ ಲಂಕಾ ಬೌಲರ್‌ಗಳ ದಾಳಿಗೆ ತತ್ತರಿಸಿತು. 3ನೇ ಕ್ರಮಾಂಕದಲ್ಲಿ ಬಂದ ನಜ್ಮುಲ್ ಹೊಸೈನ್ ಶಾಂತೋ 122 ಎಸೆತಗಳಲ್ಲಿ 89 ರನ್‌ (7 ಬೌಂಡರಿ), ತೌಹಿದ್ ಹೃದಯೊಯ್ 20 ರನ್‌ ಗಳಿಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಚೆಲ್ಲಿದ ಪರಿಣಾಮ ತಂಡಕ್ಕೆ ಸೋಲಾಯಿತು.

Loading

Leave a Reply

Your email address will not be published. Required fields are marked *