ಇಸ್ಲಾಮಾಬಾದ್: 2023ರ ಏಕದಿನ ಏಷ್ಯಾಕಪ್ (Asia Cup 2023) ಹಾಗೂ ವಿಶ್ವಕಪ್ (WorldCup) ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ತಂಡಕ್ಕೆ ಹೊಸ ಜೆರ್ಸಿಯನ್ನ ಅನಾವರಣಗೊಳಿಸಿದೆ ಈ ಕುರಿತ ವಿಶೇಷ ವೀಡಿಯೋ ತುಣುಕನ್ನು ಪಿಸಿಬಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೀಡಿಯೋ ಕೊನೆಯಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಮ್, ಶಾದಾಬ್ ಖಾನ್ ಹಾಗೂ ಜಸೀಮ್ ಶಾ, ಮಹಿಳಾ ಕ್ರಿಕೆಟ್ ತಂಡದ ನಿದಾ ಧಾರ್, ಅಲಿಯಾ ರಿಯಾಜ್ ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಹಸಿರು ಸ್ಟಾರ್ಗಳನ್ನು ಹೊಂದಿರುವ ಈ ಉಡುಪು ಆಟಗಾರರಿಗೆ ಮಾಸ್ ಲುಕ್ ನೀಡುತ್ತಿದೆ.
ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿಗೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ತಂಡವು ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ 118 ಶ್ರೇಯಾಂಕ (2,725 ಅಂಕ) ಗಳಿಸುವ ಮೂಲಕ ನಂ.1 ಸ್ಥಾನಕ್ಕೇರಿದೆ. 118 ಶ್ರೇಯಾಂಕ (2,714 ಅಂಕ) ಗಳಿಸಿರುವ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, 113 ಶ್ರೇಯಾಂಕ (4,081 ಅಂಕ) ಹೊಂದಿರುವ ಟೀಂ ಇಂಡಿಯಾ 3ನೇ ಸ್ಥಾನದಲ್ಲಿದೆ.
ಇತ್ತೀಚೆಗೆ ಅಫ್ಘಾನಿಸ್ತಾನದ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ನಾಯಕ ಬಾಬರ್ ಆಜಂ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಪಾಕಿಸ್ತಾನ ತಂಡ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿತ್ತು. ಈ ಮೂಲಕ ನಂ.1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾವನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು