ಅಂಗಾಂಗ ದಾನ ದಿನಾಚರಣೆಗೆ ರಾಯಭಾರಿಯಾಗಿ ಅಶ್ವಿನಿ ಪುನೀತ್ ಆಹ್ವಾನಿಸಿದ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸಲು ರಾಯಭಾರಿ ಆಗುವಂತೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ.
ವರನಟ ಡಾ. ರಾಜ್ಕುಮಾರ್ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆ.3ರಂದು ಹಮ್ಮಿಕೊಂಡಿರುವ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.
ವರನಟ ಡಾ. ರಾಜಕುಮಾರ್ ರಂತೆ ನಟ ಪುನೀತ್ ರಾಜ್ ಕುಮಾರ್ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಮಾದರಿಯಾಗಿದ್ದರು. ಪುನೀತ್ ರಾಜ್ ಕುಮಾರ್ ತಮ್ಮ ಕಣ್ಣುಗಳನ್ನು ದಾನ ಮಾಡಿದ ಬಳಿಕ ಅದೆಷ್ಟೋ ಜನರು ತಮ್ಮ ಕಣ್ಣುಗಳನ್ನು ದಾನವಾಗಿ ಬರೆದುಕೊಟ್ಟಿದ್ದಾರೆ. ಪುನೀತ್ ರಾಜಕುಮಾರ್ ಅವರ ಕಣ್ಣಗಳ ದಾನವು ರಾಜ್ಯಾದ್ಯಂತ ಸಾವಿರಾರು ಜನರಿಗೆ ಅಂಗಾಂಗ ದಾನ ಮಾಡಲು ಪ್ರೇರಣೆಯಾಗಿತ್ತು. ಇದರಿಂದಾಗಿ ಅಂಗಾಂಗ ದಾನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನಟನ ಪ್ರೇರಣೆಯಿಂದ ಅನೇಕರು ಇಂದಿಗೂ ಅಂಗಾಂಗ ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಹೀಗಾಗಿ, ಅಶ್ವಿನಿ ಪುನೀತ್ ರಾಜಕುಮಾರ್ಗೆ ಅಂಗಾಂಗ ದಾನ ಜಾಗೃತಿಗೆ ರಾಯಭಾರಿಯಾಗುವಂತೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ಸಾವಿನ ಬಳಿಕ ಒಬ್ಬ ದಾನಿ 8 ಜನರಿಗೆ ಮರು ಜನ್ಮ ನೀಡಬಹುದು. ಅಲ್ಲದೆ, ಅಂಗಾಂಗ ದಾನದಿಂದ 50 ಜನರ ಜೀವ ಉಳಿಸಬಹುದಾಗಿದೆ. ಜೀವನದ ಸಾರ್ಥಕತೆ ಕಾಣಬಹುದಾದ ಅಂಗಾಂಗ ದಾನಕ್ಕೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ನೀಡುವತ್ತ ಕಾರ್ಯಕ್ರಮಗಳನ್ನ ರೂಪಿಸಲು ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.ಈ ದಿನಾಚರಣೆದಂದು ಅಂಗಾಂಗ ದಾನ ಮಾಡಿದ 150 ಕುಟುಂಬಗಳನ್ನು ಸನ್ಮಾನಿಲಾಗುತ್ತದೆ. ಅಂದಾಜು 3 ಲಕ್ಷ ಜನರು ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ. ನಿಮ್ಹಾನ್ಸ್ ಸೇರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾನವ ಅಂಗಾಂಗ ಹಿಂಪಡೆಯುವ ಕೇಂದ್ರ ಸ್ಥಾಪಿಸಲಾಗಿದೆ. ಉಚಿತ ಅಂಗಾಂಗ ಕಸಿ ಯೋಜನೆಯಡಿ 73 ರೋಗಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಸಚಿವ ದಿನೇಶ್ ಗುಂಡುರಾವ್ ಮಾಹಿತಿ ನೀಡಿದ್ದಾರೆ.

Loading

Leave a Reply

Your email address will not be published. Required fields are marked *