ಬೆಂಗಳೂರು ;- ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ಎಂದರೆ ಇಟಲಿ, ಇಟಲಿ ಎಂದರೆ ಯೂರೋಪ್, ಯೂರೋಪ್ ಎಂದರೆ ಮೆಕಾಲೆ, ಮತ್ತೆ ಗುಲಾಮಗಿರಿಯ ಶಿಕ್ಷಣ ಪದ್ದತಿ ಜಾರಿಗೆ ತರಲು ಹೊರಟಿದ್ದೀರಾ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಭಾರತ್ ಸ್ಕೌಟ್ಸ್ ಆಯಂಡ್ ಗೈಡ್ಸ್ ಸಭಾಂಗಣದಲ್ಲಿ ಪೀಪಲ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಆಯೋಜನೆ ಮಾಡಿದ್ದ ಶಿಕ್ಷಣ ತಜ್ಞರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಎನ್ಇಪಿ ವಿರೋಧ ನಿರೀಕ್ಷಿತ. ಇದು ಕಾಂಗ್ರೆಸ್ನ ಮನಸ್ಥಿತಿ. ಇಂತಹ ಪೂರ್ವಾಗ್ರಹ ಪೀಡಿತ ಚಿಂತನೆ ಇರಿಸಿಕೊಂಡು ಚರ್ಚಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದಕ್ಕಿಂತ ಶಿಕ್ಷಣ ಕ್ಷೇತ್ರಕ್ಕೆ ಅವಮಾನ ಮತ್ತೊಂದಿಲ್ಲ ಎಂದು ಹೇಳಿದರು.
ಎಲ್ಲ ರಂಗದಲ್ಲಿ ಜಗತ್ತು ಮುಂದೆ ಹೋಗುತ್ತಿದೆ. ನಾನು ಮಾತ್ರ ಇಲ್ಲೇ ಕುಳಿತಿರುತ್ತೇನೆ ಎಂದರೆ ಜಗತ್ತು ಕಾಯುವುದಿಲ್ಲ, ಮುಂದೆ ಹೋಗುತ್ತದೆ. ಆಗ ನಮ್ಮ ಮಕ್ಕಳ ಭವಿಷ್ಯ ಏನು? ನಾವು ಕೂಪ ಮಂಡೂಕಗಳಾಗಬೇಕಾ?. ಪ್ರಗತಿಪರರು ಎಂದು ಹೇಳಿಕೊಂಡು ಪ್ರಗತಿಗೆ ವಿರುದ್ಧ ಹೋಗುತ್ತಿದ್ದಾರೆ. ರಾಜ್ಯವನ್ನು ಮುನ್ನಡೆಸಲು ರಾಜ್ಯದ ಜನ ಅಧಿಕಾರ ಕೊಟ್ಟಿದ್ದಾರೆ ಎಂದರು.
ನೀವು ಇಂದು ನಮ್ಮ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದೀರಿ, ನೀವು ಬಿಜೆಪಿಯನ್ನು ವಿರೋಧಿಸಿ, ಆದರೆ ಮಕ್ಕಳ ಭವಿಷ್ಯ ಯಾಕೆ ಹಾಳು ಮಾಡುತ್ತಿದ್ದೀರಿ, ಮತ ಹಾಕಿದವರಿಗಷ್ಟೇ ಆಡಳಿತ ನಡೆಸುವುದಲ್ಲ, ಮತ ಹಾಕದ ಮಕ್ಕಳು, ಮೂಕ ಪ್ರಾಣಿಗಳು, ಸಸ್ಯಗಳ ಪೋಷಣೆ ಜವಾಬ್ದಾರಿ ಕೂಡ ನಿಮ್ಮ ಮೇಲಿದೆ ಎಂದರು