ಬೆಂಗಳೂರು: ರಾಜ್ಯದ ಜನರು ಬದಲಾವಣೆಯನ್ನು ಬಯಸಿ, ಬಿಜೆಪಿ ದುರಾಡಳಿತಕ್ಕೆ ಬೇಸತ್ತು ನಮಗೆ ಸ್ಪಷ್ಟ ಬಹುಮತವನ್ನು ನೀಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಕೆಲಸ ಮಾಡುತ್ತೇವೆ. ಜನರ ನಂಬಿಕೆ ಹುಸಿ ಮಾಡುವುದಿಲ್ಲ. ನಾನು ಘೋಷಿಸಿದಂತ ಐದು ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಅನುಮೋದಿಸಿ, ಆದೇಶ ಹೊರಡಿಸಲಾಗುತ್ತದೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಘೋಷಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇದು 7 ಕೋಟಿ ಕನ್ನಡಿಗರ ಗೆಲುವು. ಬರೀ ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಗೆಲುವಷ್ಟೇ ಅಲ್ಲ, 7 ಕೋಟಿ ಕನ್ನಡಿಗರ ಗೆಲುವು. ಬಿಜೆಪಿ ಯಾವತ್ತೂ ಜನರ ಆಶೀರ್ವಾದ ಪಡೆದು ಅಧಿಕಾರ ನಡೆಸಲಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು. ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಆಗಿದೆಯೋ ಆ ಎಲ್ಲಾ ಸಂದರ್ಭಗಳಲ್ಲಿ ಕೂಡ, ಸುಭದ್ರ ಸರ್ಕಾರ ಕೊಡಲಿಕ್ಕೆ ಸಾಧ್ಯವಾಗಿಲ್ಲ ಎಂದರು.