ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾರೋ ಒಬ್ಬರು ನಾಯಕರು, ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಅಂತ ಹೇಳಿದ್ದಾರೆ. 2018ರಲ್ಲಿ ಯಾವ ಅನ್ನ ಹಳಸಿತ್ತು? ಯಾವ ನಾಯಿ ಹಸಿದಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ದಿನೇಶ್ ಗುಂಡೂರಾವ್ ಹೇಳಿಕೆಗೆ ಬೆಂಗಳೂರಿನಲ್ಲಿ ಕಿಡಿಕಾರಿದ ಅವರು, 2018ರಲ್ಲಿ ನಮ್ಮ ಮನೆಗೆ ಬಂದಿದ್ದವರು ಯಾರು? ಅವತ್ತು ಯಾವ ಅನ್ನ ಹಳಸಿತ್ತು? ಯಾವ ನಾಯಿ ಹಸಿದಿತ್ತು ಎಂದು ಪ್ರಶ್ನಿಸಿ, ರಾಜ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದೇನೆ. ಅಮಲಿನಲ್ಲಿ ನಾವು ಏನೋ ಮಾಡಿಬಿಟ್ಟಿದ್ದೇವೆ, ಜೆಡಿಎಸ್ ಪಕ್ಷವನ್ನು ಮುಗಿಸಿಬಿಟ್ಟಿದ್ದೇವೆ, ಅಲ್ಲಿಂದ ಇಲ್ಲಿಂದ ಕರೆದುಕೊಂಡು ಬರುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ. ಅದಕ್ಕೆಲ್ಲಾ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಜೆಡಿಎಸ್ ಮೈತ್ರಿ ಚರ್ಚೆಯಲ್ಲಿ ಎಲ್ಲಾ ವಿಚಾರಗಳು ಪ್ರಾರಂಭಿಕ ಹಂತದಲ್ಲಿ ಇದ್ದು, ಈವರೆಗೂ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ, ಮುಂದೆ ಈ ಬಗ್ಗೆ ಹೇಳುತ್ತೇವೆ ಎಂದ ಅವರು, ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿಗೆ ಒಪ್ಪಿಗೆ ಸೂಚಿದ್ದಾರಾ ಎನ್ನುವ ಪ್ರಶ್ನೆಗೂ, ಕಾದು ನೋಡಿ ಎಂದಷ್ಟೇ ಉತ್ತರಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ನಾನು ಅಭಾರಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈತ್ರಿಕೂಟದ ಬಗ್ಗೆ ಅವರು ಹೇಳಿದ್ದಾರೆ. ರಾಜ್ಯದ ಜನರನ್ನು ಲೂಟಿ ಮಾಡುತ್ತಿರುವವರಿಗೆ ಕಡಿವಾಣ ಹಾಕಬೇಕಿದೆ. 2006ರಲ್ಲಿಯೂ ನಾನು ಬಿಜೆಪಿ ಜತೆ ಸೇರಿ ಸರಕಾರ ಮಾಡಿದ್ದೆ ಎಂದರು