ಇಸ್ಲಾಮಾಬಾದ್: ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾಗಿದ್ದ ಗೆಳೆಯನನ್ನು ಭೇಟಿ ಮಾಡುವ ಸಲುವಾಗಿ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಇಬ್ಬರು ಮಕ್ಕಳ ತಾಯಿ ಅಂಜು ಇಸ್ಲಾಂ ಧರ್ಮಕ್ಕೆ (Islam Religion) ಮತಾಂತರಗೊಂಡ ಬಳಿಕ ತನ್ನ ಪಾಕಿಸ್ತಾನಿ (Pakistan) ಸ್ನೇಹಿತನನ್ನು ವಿವಾಹವಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಜು (34) ತನ್ನ ಪಾಕಿಸ್ತಾನಿ ಸ್ನೇಹಿತನಾದ ನಸ್ರುಲ್ಲಾ (29) ಎಂಬಾತನನ್ನು ಭೇಟಿ ಮಾಡುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ್ದು, ಆತನ ಮನೆಯಲ್ಲಿಯೇ ತಂಗಿದ್ದಳು. 2019ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಇವರು ಸ್ನೇಹಿತರಾಗಿದ್ದು, ಮಂಗಳವಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸ್ಥಳೀಯ ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಅಂಜು, ನಸ್ರುಲ್ಲಾ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ದಿರ್ ಬಾಲಾದಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಮಲಕಂಡ್ ವಿಭಾಗದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ, ಅಂಜು ಮತ್ತು ನಸ್ರುಲ್ಲಾ ಅವರ ಮದುವೆಯನ್ನು (Marriage) ದೃಢಪಡಿಸಿದ್ದು, ಇಸ್ಲಾಂಗೆ ಮತಾಂತರಗೊಂಡ ಅಂಜುಗೆ ಫಾತಿಮಾ ಎಂದು ಹೆಸರಿಡಲಾಗಿದೆ ಎಂದು ಹೇಳಿದರು. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಭಾರತೀಯ ಮಹಿಳೆ ಅಂಜುವನ್ನು ನ್ಯಾಯಾಲಯದಿಂದ ಮನೆಗೆ ಕರೆದೊಯ್ಯಲಾಗಿದೆ ಎಂದರು.
ಉತ್ತರಪ್ರದೇಶದ (Uttar Pradesh) ಕೈಲೋರ್ ಗ್ರಾಮದಲ್ಲಿ ಜನಿಸಿದ ಅಂಜು ರಾಜಸ್ಥಾನದ (Rajasthan) ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಳು. ಪಾಕಿಸ್ತಾನಕ್ಕೆ ತೆರಳಿದ ಬಳಿಕ ‘ಇಲ್ಲಿ ಸುರಕ್ಷಿತವಾಗಿದ್ದೇನೆ’ ಎಂದು ಹೇಳುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಅಂಜು ಈ ಹಿಂದೆ ಅರವಿಂದ್ ಎಂಬವರನ್ನು ಮದುವೆಯಾಗಿದ್ದು, 15 ವರ್ಷದ ಮಗಳು ಮತ್ತು 6 ವರ್ಷದ ಮಗ ಇದ್ದಾನೆ.
ನವದೆಹಲಿಯಲ್ಲಿರುವ (New Delhi) ಪಾಕಿಸ್ತಾನದ ಹೈಕಮಿಷನ್‌ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ ಅಪ್ಪರ್ ದಿರ್‌ಗೆ ಮಾತ್ರ ಮಾನ್ಯವಾಗಿರುವ ಅಂಜುಗೆ 30 ದಿನಗಳ ವೀಸಾವನ್ನು ನೀಡಲು ನಿರ್ಧರಿಸಲಾಗಿದೆ. ಆ ಪ್ರಕಾರ ಆಗಸ್ಟ್ 20ರಂದು ಅಂಜು ಭಾರತಕ್ಕೆ ಮರಳಲಿದ್ದಾಳೆ ಎಂದು ವರದಿಗಳು ತಿಳಿಸಿವೆ.