ಬೆಂಗಳೂರು: ವೃದ್ಧ ದಂಪತಿ ನೇಣಿಗೆ ಶರಣಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕೃಷ್ಣ ನಾಯ್ಡು (88) ಮತ್ತು ಸರೋಜಮ್ಮ (72) ಆತ್ಮಹತ್ಯೆ ಮಾಡಿಕೊಂಡ ವೃದ್ದ ದಂಪತಿಯಾಗಿದ್ದು, ಇಂದು ಬೆಳಗ್ಗೆ 5.30ರ ಸುಮಾರಿಗೆ ಸ್ಥಳೀಯರು ಬಂದು ಬಾಗಿಲು ಬಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಂಧ್ರ ಮೂಲದ ದಂಪತಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಕಟ್ಟಡದ ಮಾಲೀಕರಾಗಿರೋ ದಂಪತಿ ಮೂರು ಅಂತಸ್ತಿನ ಕಟ್ಟಡದ ಟೆರೇಸ್ ನಲ್ಲಿರುವ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಗೆ ಅಶೋಕ್ ಎಂಬ ಓರ್ವ ಮಗನಿದ್ದು ಪತ್ನಿ ಜೊತೆ ಬೇರೆ ಕಡೆ ವಾಸವಿದ್ದರು. ಸದ್ಯ ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಿಕೆ ಅಚ್ಚುಕಟ್ಟು ಪೊಲೀಸರಿಂದ ತನಿಖೆ ನಡೆಯುತ್ತಿದೆ.