ಗುಂಡಿಕ್ಕಿ ಅಮೆಜಾನ್ ಕಂಪನಿ ಸೀನಿಯರ್ ಮ್ಯಾನೇಜರ್ ಹತ್ಯೆ..!

ನವದೆಹಲಿ: ಅಮೆಜಾನ್ (Amazon) ಕಂಪನಿಯ ಸೀನಿಯರ್ ಮ್ಯಾನೇಜರ್ ನನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಈ ಘಟನೆ ಮಂಗಳವಾರ ರಾತ್ರಿ 11.37ರ ಸುಮಾರಿಗೆ ನವದೆಹಲಿಯ ಭಜನ್‍ಪುರ ಪ್ರದೇಶದಲ್ಲಿ (Bhajanpura Area) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌

ಮೃತನನ್ನು ಹರ್‌ಪ್ರೀತ್ ಗಿಲ್ (36) ಎಂದು ಗುರುತಿಸಲಾಗಿದ್ದು, ಇವರು ಭಜನ್‍ಪುರ ನಿವಾಸಿ. ಗಿಲ್ ಅಮೆಜಾನ್ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದ ಕೂಡಲೇ ಗಿಲ್ ಅವರನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಾಯಿಸಿತಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಗಾಯಾಳು ಗೋವಿಂದ್ ಸಿಂಗ್ ಕೂಡ ಭಜನ್ ಪುರ ಪ್ರದೇಶದ ನಿವಾಸಿ. ಸದ್ಯ ಇವರು ಎಲ್‍ಎನ್‍ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಗಿಲ್ ಹಾಗೂ ಸಿಂಗ್ ಇಬ್ಬರೂ ಬೈಕಿನಲ್ಲಿ ಭಜನ್ ಪುರ ಪ್ರದೇಶದ ಸುಭಾಷ್ ವಿಹಾರ್ ಬಳಿ ತೆರಳುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ಪರಿಣಾಮ ಗಿಲ್ ತಲೆಗೆ ಗುಂಡು ತಗುಲಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ನೇಹಿತ ಸಿಂಗ್ ಬಲ ಕಿವಿಗೆ ಗುಂಡು ತಗುಲಿ ಗಾಯಗಳಾಗಿವೆ ಎಂದು ವರದಿಯಾಗಿದೆ.

Loading

Leave a Reply

Your email address will not be published. Required fields are marked *