ವಾಷಿಂಗ್ಟನ್: ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಚುನಾವಣಾ (Election) ಅಕ್ರಮದ ಆರೋಪದ ಮೇಲೆ ಗುರುವಾರ ಜಾರ್ಜಿಯಾದಲ್ಲಿ ಬಂಧಿಸಲಾಗಿತ್ತು. ಬಳಿಕ 1.65 ಕೋಟಿ ರೂ. (200,000 ಡಾಲರ್) ಬಾಂಡ್ ಮೇರೆಗೆ ಬಿಡುಗಡೆ ಮಾಡಲಾಗಿದೆ.
2020ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು 18 ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಲು ಸಹಕರಿಸಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಈ ರೀತಿಯ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲನೇ ಮಾಜಿ ಅಧ್ಯಕ್ಷ ಇವರಾಗಿದ್ದಾರೆ. ಬಂಧನದ ಬಳಿಕ ಜಾರ್ಜಿಯಾ ಜೈಲಿನಲ್ಲಿ ಅವರಿಗೆ ಕೈದಿ ಸಂಖ್ಯೆ `ಪಿಓ1135809′ ನೀಡಲಾಗಿತ್ತು.
ಬಂಧನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಇದು ಅಮೆರಿಕಕ್ಕೆ ಬಹಳ ದುಃಖದ ದಿನ. ಇಲ್ಲಿ ನಡೆದಿರುವುದು ನ್ಯಾಯದ ಅಣಕವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಅವರು ಏಪ್ರಿಲ್ನಿಂದ ನಾಲ್ಕು ಬಾರಿ ಕ್ರಿಮಿನಲ್ ದೋಷಾರೋಪಣೆಗೆ ಒಳಗಾಗಿದ್ದಾರೆ. ನ್ಯೂಯಾರ್ಕ್ನಲ್ಲಿ ನೀಲಿಚಿತ್ರದ ನಟಿಗೆ ಹಣ ಪಾವತಿಸಿದ ಆರೋಪ, ಫ್ಲೋರಿಡಾದಲ್ಲಿ ಸರ್ಕಾರದ ಉನ್ನತ ರಹಸ್ಯ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ