ವಿಜಯಪುರ: ರಾಮಮಂದಿರ (Ram Mandir) ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಮಾತನಾಡಿರುವ ಕಾಂಗ್ರೆಸ್ ಪಕ್ಷವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ರಾವಣನಿಗೆ ಹೋಲಿಸಿ ತರಾಟೆಗೆ ತೆಗೆದುಕೊಂಡರು.
ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ಕಾಂಗ್ರೆಸ್ನವರು ಕೌರವರು, ರಾವಣನಂತೆ ವರ್ತಿಸುತ್ತಿದ್ದಾರೆ. ಹೊಸ ಹಿಂದುತ್ವ ಪ್ರಾರಂಭ ಆಗುತ್ತದೆ. ಅಯ್ಯೋಧೆಯಲ್ಲಿ ರಾಮಮಂದಿರದ ಬಳಿಕ ಹಿಂದೂ ಯುಗ ಆರಂಭ ಆಗುತ್ತದೆ. ಸನಾತನ ಧರ್ಮ ವಿಶ್ವದಲ್ಲಿ ಪಸರಿಸುತ್ತದೆ ಎಂದು ಭವಿಷ್ಯ ನುಡಿದರು.
ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಹೋಗುವುದಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷ ಗುಲಾಮಗಿರಿಯ ಸಂಕೇತವಾಗಿದೆ. ಹಿಂದಿನ ಕಾಲದಲ್ಲಿ ಕೌರವರು, ರಾವಣ ಹೇಗಿದ್ದನೋ ಹಾಗೇ ಕಾಂಗ್ರೆಸ್ ಕೂಡಾ ಇದೆ. ಕಾಂಗ್ರೆಸ್ ಗುಲಾಮಗಿರಿ ಸಂಕೇತ ಎಂದು ಅವರ ನಾಯಕರ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದರು.
ರಾಮನ ಭಕ್ತರಾಗಿದ್ದರೆ, ಅವರು ಮಂದಿರ ಉದ್ಘಾಟನೆಗೆ ಹೋಗಬೇಕಿತ್ತು. ಕಾಂಗ್ರೆಸ್ ನಾಯಕರು ಮಂದಿರ ನಿರ್ಮಾಣದ ವಿರುದ್ಧ ವಕೀಲರನ್ನ ನೇಮಿಸಿದ್ದರು. ಮಂದಿರವನ್ನು ಬಿಜೆಪಿಯವರಾದ್ರು ಕಟ್ಟಲಿ, ಆರ್ಎಸ್ಎಸ್ನವರಾದ್ರು ಕಟ್ಟಲಿ, ವಿಹೆಚ್ಪಿ ಅವರಾದ್ರು ಕಟ್ಟಲಿ. ಕಾಂಗ್ರೆಸ್ನವರು ನಿಜವಾಗಿ ರಾಮನ ಭಕ್ತರಾಗಿದ್ದರೆ ಉದ್ಘಾಟನೆಗೆ ಹೋಗಬೇಕಿತ್ತು ಎಂದು ಟಾಂಗ್ ಕೊಟ್ಟರು.