ಎಂಟು ವರ್ಷಗಳ ಬಳಿಕ ವಾಯುಸೇನೆಯ ಟ್ರಾನ್ಸ್‌ಪೋರ್ಟ್‌ ವಿಮಾನದ ಅವಶೇಷಗಳು ಪತ್ತೆ!

ನವದೆಹಲಿ: 2016ರ ಜುಲೈ 22ರಂದು ಬಂಗಾಳಕೊಲ್ಲಿಯಲ್ಲಿ ಕಾರ್ಯಾಚರಣೆ ವೇಳೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ An-32 ವಿಮಾನದ (IAFs AN-32 Aircraft) ಅವಶೇಷಗಳು 8 ವರ್ಷಗಳ ನಂತರ ಪತ್ತೆಯಾಗಿವೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದೇ ವಿಮಾನದಲ್ಲಿ ಮಂಗಳೂರಿನ ಗುರುವಾಯನಕೆರೆಯ ಯೋಧ ಏಕನಾಥ ಶೆಟ್ಟಿ (Eknath Shetty) ಕೂಡ ಇದ್ದರು.

ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯು ವಿಮಾನವನ್ನು ಪತ್ತೆಹಚ್ಚಲು ಸ್ವಾಯತ್ತ ನೀರೊಳಗಿನ ವಾಹನವನ್ನು (AUV) ಬಳಸಿದೆ. ಅಪಘಾತಕ್ಕೀಡಾಗಿದ್ದ ವಿಮಾನದ ಅವಶೇಷಗಳು ಚೆನ್ನೈ ಕರಾವಳಿಯಿಂದ ಸರಿಸುಮಾರು 140 ನಾಟಿಕಲ್ ಮೈಲುಗಳಷ್ಟು (ಅಂದಾಜು 310 ಕಿಮೀ) ಸಮುದ್ರದ ಆಳದಲ್ಲಿ ಪತ್ತೆಯಾಗಿದೆ. ಶೋಧದ ಚಿತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. An-32 ವಿಮಾನ ಎನ್ನುವುದಕ್ಕೆ ಸಾಕಷ್ಟು ಪುರಾವೆ ಸಿಕ್ಕಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಬಹು-ಬೀಮ್ ಸೋನಾರ್, ಸಿಂಥೆಟಿಕ್ ಅಪರ್ಚರ್ ಸೋನಾರ್ ಮತ್ತು ಹೈ-ರೆಸಲ್ಯೂಶನ್ ಛಾಯಾಗ್ರಹಣ ಸೇರಿದಂತೆ ಬಹು ಪೇಲೋಡ್‌ಗಳನ್ನು ಬಳಸಿಕೊಂಡು 3,400 ಮೀ ಆಳದಲ್ಲಿ ಹುಡುಕಾಟ ನಡೆಸಲಾಗಿತ್ತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಘಟನೆ ಏನು?
2016 ರ ಜು.22 ರಂದು ಚೆನ್ನೈಯ ತಾಂಬರಂ ಏರ್‌ಬೇಸ್‌ನಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ ನೆಲೆಗೆ ತೆರಳುತ್ತಿದ್ದ ಭಾರತೀಯ ವಾಯುಸೇನೆಯ ಎಎನ್‌-32 ಯುದ್ಧ ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು. ಚೆನ್ನೈನ ತಾಂಬರಂನಿಂದ ಬೆಳಿಗ್ಗೆ 8:30 ಕ್ಕೆ ಟೇಕ್ ಆಫ್ ಆಗಿತ್ತು. ಆದರೆ ಕೊಲ ಹೊತ್ತಿನಲ್ಲೇ ಸಂಪರ್ಕ ಕಳೆದುಕೊಂಡಿತ್ತು. ಕೊನೆಯ ಬಾರಿಗೆ 16 ನಿಮಿಷಗಳ ನಂತರ ಸಂಪರ್ಕಿಸಲಾಗಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿತ್ತು.

29 ಮಂದಿ ಯೋಧರು ಕಣ್ಮರೆ
ಈ ಯುದ್ಧ ವಿಮಾನದಲ್ಲಿ 29 ಮಂದಿ ಯೋಧರಿದ್ದರು. ಈ ಯೋಧರ ಪೈಕಿ ಕರ್ನಾಟಕದ ಏಕೈಕ ಯೋಧ ಏಕನಾಥ ಶೆಟ್ಟಿ ಕೂಡ ಕಣ್ಮರೆಯಾಗಿದ್ದರು. ಐಎಎಫ್‌ನ ನಾಪತ್ತೆಯಾದ ವಿಮಾನದಲ್ಲಿದ್ದವರು ಸತ್ತಿರಬಹುದು ಎಂದು ವಿಚಾರಣೆ ವೇಳೆ ನ್ಯಾಯಾಲಯ ತೀರ್ಮಾನಿಸಿತ್ತು. ವಿಮಾನವು ನೀರೊಳಗಿನ ಲೊಕೇಟರ್ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಇದು ಹುಡುಕಾಟವನ್ನು ಕಷ್ಟಕರವಾಗಿಸಿತ್ತು. ವಿಮಾನ ಪತ್ತೆಗಾಗಿ ಕೇಂದ್ರ ಸರ್ಕಾರ ಮತ್ತು ಮಿಲಿಟರಿ ತಜ್ಞರು 3 ತಿಂಗಳು ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಗಾಗಿ ಪಿ-8ಎ, ಮೂರು ಡೋರ್ನಿಯರ್‌ ವಿಮಾನ, ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

 

 

Loading

Leave a Reply

Your email address will not be published. Required fields are marked *