ಅಭಿಮಾನಿ ಬೈಕ್ʼಗೆ ನಟ ಯಶ್ ಬೆಂಗಾವಲು ವಾಹನ ಡಿಕ್ಕಿ..! ಅಭಿಮಾನಿ ಸಾವು

ದಗ: ಮೂವರು ಅಭಿಮಾನಿಗಳ ಸಾವಿನ್ನಪ್ಪಿದ ದುರ್ಘಟನೆ ಮಾಸುವ ಮುನ್ನವೇ ರಾಕಿಂಗ್‌ ಸ್ಟಾರ್‌ ಯಶ್ ಮತ್ತೋರ್ವ ಅಭಿಮಾನಿ ಇಂದು ಮೃತಪಟ್ಟಿದ್ದಾರೆ. ಮೃತನನ್ನು ನಿಖಿಲ್ ಗೌಡ (22) ಎಂದು ಗುರುತಿಸಲಾಗಿದ್ದು, ಈತ ಗದಗದ ಬಿಂಕದಕಟ್ಟಿ ನಿವಾಸಿ. ಈತ ಲಕ್ಷ್ಮೇಶ್ವರ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ.

ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಅಂಗವಾಗಿ ತಡರಾತ್ರಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮುರಳಿ, ನವೀನ್, ಹನುಮಂತ ಎಂಬ ಮೂವರು ನಿಧನರಾಗಿದ್ದು, ಉಳಿದ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಟ್ಟ ಯಶ್‌,

ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ತೆರಳಿದ್ದರು. ಈ ವೇಳೆ ಯಶ್‌ ನೋಡಲು ನಿಖಿಲ್‌ ಗದಗಕ್ಕೆ ಬಂದಿದ್ದ. ಬಳಿಕ ಯಶ್ ಹುಬ್ಬಳ್ಳಿಗೆ ವಾಪಸ್ಸಾಗುವಾಗ ತನ್ನ ಬೈಕಿನಲ್ಲಿ ಯಶ್ ವಾಹನ ಫಾಲೋ ಮಾಡಲು ಮುಂದಾಗಿದ್ದ.

ಈ ವೇಳೆ ಪೊಲೀಸ್ ವಾಹನಕ್ಕೆ ‌ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಪರಿಣಾಮ ನಿಖಿಲ್‌ ಕೂಡ ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ನಿಖಿಲ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಸದ್ಯ ಆಸ್ಪತ್ರೆ ಬಳಿ‌ ನಿಖಿಲ್ ಕುಟುಂಬಸ್ಥರ‌ ಆಕ್ರಂದನ ಮುಗಿಲು ಮುಟ್ಟಿದೆ.

Loading

Leave a Reply

Your email address will not be published. Required fields are marked *