ಶಿವಣ್ಣ ಮತ್ತು ಪ್ರಕಾಶ್ ರಾಜ್ ಅವರ ಕ್ಷಮೆಯನ್ನು ನಾನು ಸ್ವೀಕಾರ ಮಾಡಲಾರೆ ಎಂದ ನಟ ಸಿದ್ದಾರ್ಥ್

ನಟ ಸಿದ್ದಾರ್ಥ ತಮ್ಮ ಸಿನಿಮಾದ ಪತ್ರಿಕಾಗೋಷ್ಠಿಗಾಗಿ ಬೆಂಗಳೂರಿಗೆ ಬಂದಾಗ ಕನ್ನಡಪರ ಕೆಲ ಹೋರಾಟಗಾರರು ಅವರನ್ನು ತಡೆದಿದ್ದರು. ಕಾವೇರಿ (Cauvery) ಹೋರಾಟ ನಡೆಯುತ್ತಿರುವಾಗ ತಮಿಳು ಚಿತ್ರವೊಂದರ ಪತ್ರಿಕಾಗೋಷ್ಠಿಯನ್ನು ನಡೆಸಬಾರದು ಎಂದು ಮನವಿ ಮಾಡಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಪರ ಮತ್ತುವಿರೋಧದ ಚರ್ಚೆಗೂ ಕಾರಣವಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಪ್ರಕಾಶ್ ರಾಜ್ ಇಬ್ಬರೂ ಸಿದ್ದಾರ್ಥಗೆ ಕ್ಷಮೆ ಕೇಳಿದ್ದರು. ಈ ಘಟನೆ ಆಗಬಾರದಿತ್ತು ಎಂದು ಪ್ರತಿಕ್ರಿಯಿಸಿದರು. ಈ ಕುರಿತಂತೆ ಇದೇ ಮೊದಲ ಬಾರಿಗೆ ಸಿದ್ದಾರ್ಥ (Siddhartha) ಮಾತನಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಪ್ರಕಾಶ್ ರಾಜ್ ಅವರ ಕ್ಷಮೆಯನ್ನು ನಾನು ಸ್ವೀಕಾರ ಮಾಡಲಾರೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಹಿರಿಯ ನಟರಿಗೆ ಗೌರವ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಿದ್ದಾರ್ಥ, ‘ಶಿವರಾಜ್ ಕುಮಾರ್ (Shivraj Kumar) ಮತ್ತು ಪ್ರಕಾಶ್ ರಾಜ್ (Prakash Raj)ಹಿರಿಯ ಕಲಾವಿದರು. ಅವರಿಗೂ ಮತ್ತು ನಡೆದ ಘಟನೆಗೂ ಸಂಬಂಧವೇ ಇರಲಿಲ್ಲ. ಆದರೂ, ಕಲಾವಿದರ ಮೇಲಿನ ಗೌರವಕ್ಕಾಗಿ ಅವರು ನನಗೆ ಕ್ಷಮೆ ಕೇಳಿದ್ದಾರೆ. ಅವರು ಮಾಡದೇ ಇರುವ ತಪ್ಪಿಗೆ ಕ್ಷಮೆ ಕೇಳಬಾರದಿತ್ತು. ಹಾಗಾಗಿ ನಾನು ಅವರ ಕ್ಷಮೆಯನ್ನು ಸ್ವೀಕರಿಸುವುದಿಲ್ಲ. ಆ ಇಬ್ಬರ ಕಲಾವಿದರ ಮೇಲೆ ನನಗೆ ಇನ್ನೂ ಗೌರವ ಹೆಚ್ಚಾಯಿತು’ ಎಂದಿದ್ದಾರೆ.

ಕಾವೇರಿ ನದಿ ನೀರಿನ ಹಂಚಿಕೆಯ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ್ದಾರೆ. ನಾನು ಒಬ್ಬ ನಟನಾಗಿ ನನ್ನ ಸಿನಿಮಾ ಬಗ್ಗೆ ಮಾತನಾಡುತ್ತೇನೆ. ಇದು ರಾಜಕೀಯದಲ್ಲಿ ನನ್ನನ್ನು ಎಳೆತರಬೇಡಿ. ಕಾವೇರಿ ವಿಚಾರದಲ್ಲಿ ನಾನು ಏನೂ ಸದ್ಯ ಮಾತನಾಡಲಾರೆ. ನನ್ನ ಸಿನಿಮಾ ಬಗ್ಗೆ ಪ್ರಚಾರ ಮಾಡಲು ನಾನು ಬಂದಿದ್ದೇನೆ ಎಂದಿದ್ದಾರೆ ಸಿದ್ದಾರ್ಥ.

Loading

Leave a Reply

Your email address will not be published. Required fields are marked *