ಈ ಹಿಂದೆ ಸುದೀಪ್, ದರ್ಶನ್ ಸೇರಿದಂತೆ ಹಲವು ಕಲಾವಿದರು ತಮ್ಮ ಹುಟ್ಟು ಹಬ್ಬಕ್ಕೆ ಕೇಕ್, ಹಾರ ತರಬೇಡಿ ಎಂದು ಮನವಿ ಮಾಡಿಕೊಂಡಿದ್ದು ಇದೆ. ಆ ಹಣವನ್ನು ಅನಾಥಾಶ್ರಮಕ್ಕೂ, ವೃದ್ಧಾಶ್ರಮಕ್ಕೋ ಅಥವಾ ನಿಮ್ಮ ಕುಟುಂಬದ ಒಳ್ಳೆಯ ಕೆಲಸಕ್ಕೂ ಉಪಯೋಗಿಸಿಕೊಳ್ಳಿ ಎಂದಿದ್ದರು. ಇದೀಗ ಅದೇ ಹಾದಿಯಲ್ಲೇ ಧ್ರುವ ಸರ್ಜಾ ಕೂಡ ನಡೆಯುತ್ತಿದ್ದಾರೆ.ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ ಮೂರು ವರ್ಷಗಳ ನಂತರ ತಮ್ಮ ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳ ಜೊತೆ ಆಚರಿಸಲು ರೆಡಿಯಾಗಿದ್ದಾರೆ. ಅಕ್ಟೋಬರ್ 6ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಧ್ರುವ, ಅಭಿಮಾನಿಗಳಿಗಾಗಿ (Fans) ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ, ತುರಾಯಿಗಳನ್ನು ತರಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಅಕ್ಟೋಬರ್ 5ರಂದು ಧ್ರುವ ಮನೆಯ ಮುಂದೆಯೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಅಂದು ಅಭಿಮಾನಿಗಳು ಶಾಲಾ ಮಕ್ಕಳಿಗೆ ಬೇಕಾಗುವ ಸಾಮಗ್ರಿಗಳನ್ನು ಉಡುಗೊರೆ ರೂಪದಲ್ಲಿ ಕೊಡುವಂತೆ ಕೇಳಿಕೊಂಡಿದ್ದಾರೆ. ಪುಸ್ತಕ, ಬ್ಯಾಗ್, ಪೆನ್ನು ಹೀಗೆ ಅಗತ್ಯ ವಸ್ತುಗಳನ್ನು ಮಾತ್ರ ತನ್ನಿ ಎಂದು ಹೇಳಿಕೊಂಡಿದ್ದಾರೆ.