ಬೆಂಗಳೂರು: ನಗರದ ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸೈಯದ್ ಮಹಮ್ಮದ್ ಅನ್ವರ್(37) ಬಂಧಿತ ಆರೋಪಿ.
ಜುಲೈ 4ರಂದು ಬೆಂಗಳೂರಿಗೆ ಬಂದಿದ್ದ ಸೈಯದ್ ಮಹಮ್ಮದ್ ಅನ್ವರ್, ಮದರಸಾ ಹೆಸರಿನಲ್ಲಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದನು. ಹೀಗೆ ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂದಿರುವ ಆಜಾಂ ಮಸೀದಿ ಬಳಿ ಚಂದಾ ಪಡೆದಿದ್ದ ಸೈಯದ್ ರಾತ್ರಿ ಮಸೀದಿಯಲ್ಲಿ ಮಲಗಲು ಅವಕಾಶ ಕೇಳಿದ್ದಾನೆ. ಇದಕ್ಕೆ ಸಿಬ್ಬಂದಿ ಮಸೀದಿಯಲ್ಲಿ ಮಲಗಲು ಅವಕಾಶವಿಲ್ಲ ಎಂದಿದ್ದಾರೆ.
ಇದರಿಂದ ಬೇಸರಗೊಂಡು ಮೆಜೆಸ್ಟಿಕ್ಗೆ ತೆರಳಿ ಕರ್ನೂಲ್ ಬಸ್ ಹತ್ತಿದ್ದಾನೆ. ಬಸ್ ದೇವನಹಳ್ಳಿ ದಾಟುತ್ತಿದ್ದಂತೆ 112ಗೆ ಕರೆ ಮಾಡಿದ್ದ ಸೈಯದ್ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಹುಸಿ ಕರೆ ಮಾಡಿದ್ದಾನೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಬಾಂಬ್ ಇರಲಿಲ್ಲ. ಹುಸಿ ಬಾಂಬ್ ಕರೆಯಂದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಂತರ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆಂಧ್ರಕ್ಕೆ ತೆರಳಿದ್ದ ಆರೋಪಿ ಸೈಯದ್ನನ್ನು ಶಿವಾಜಿನಗರ ಪೊಲೀಸರು ಕರ್ನೂಲ್ನಿಂದ ತೆಲಂಗಾಣದ ಮೆಹಬೂಬ್ನಗರಕ್ಕೆ ತೆರಳಿದ್ದಾಗ ಬಂಧಿಸಿದ್ದಾರೆ. ಸೈಯದ್ ಮಹಮ್ಮದ್ ಬಿಎಸ್ಸಿ ಪದವಿ ಮುಗಿಸಿದ್ದು ಕೆಲಸ ಇರಲಿಲ್ಲ. ಹೀಗಾಗಿ ಊರೂರು ಸುತ್ತಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದ. ಆರೋಪಿ ಸೈಯದ್ ಮಹಮ್ಮದ್ ಈ ಹಣದಲ್ಲೇ ಜೀವನ ಸಾಗಿಸುತ್ತಿದ್ದನು.