ಬೆಂಗಳೂರು: ರಾಷ್ಟ್ರದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಧ್ವಾಜಾರೋಹಣದ ಮೂಲಕ ಸಂಭ್ರಮವನ್ನು ಆಚರಿಸಲಾಯಿತು.
ಬಳಿಕ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು, ಕವಿ ಸಿದ್ದಲಿಂಗಯ್ಯ ಅವರ ‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಎಂಬ ಪದ್ಯವನ್ನು ಸ್ಮರಿಸುತ್ತ ರಾಷ್ಟ್ರದ ವಾಸ್ತವಿಕ ಸಂಗತಿಗಳ ಕುರಿತು ಬೇಸರ ವ್ಯಕ್ತಪಡಿಸಿದರು.
ಸರ್ವಾಧಿಕಾರಿಯ ಹತ್ತಿರಕೆ ಬಂತು 47ರ ಸ್ವಾತಂತ್ರ್ಯ, ಸ್ವಾರ್ಥದ ರಾಜಕಾರಣಿಗಳ ಹತ್ತಿರಕೆ ಬಂತು ಸ್ವಾತಂತ್ರ್ಯ ಎಂಬಂತಾಗಿದೆ. ಸ್ವಾತಂತ್ರ್ಯ ಕಟ್ಟಕಡೆಯ ಮನುಷ್ಯನಿಗೆ ಸಿಗಬೇಕಿತ್ತು. ಆದರೆ ಆತನ ಪರಿಸ್ಥಿತಿ ಅತಂತ್ರವಾಗಿದೆ. ರಾಷ್ಟ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಚಾರ, ಅನ್ಯಾಯಗಳನ್ನು ನೋಡುತ್ತಿದ್ದರೆ ನಮಗೆ ಈ ಸ್ವಾತಂತ್ರ್ಯ ಬೇಕಿತ್ತಾ ಎಂದೆನಿಸಿ ಬಹಳ ದುಃಖವಾಗುತ್ತದೆ ಎಂದು ಮು.ಚಂದ್ರ ಹೇಳಿದರು.
ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ರಾಷ್ಟ್ರವು ಸದೃಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮುತ್ತದೆ. ವಿಶ್ವಕ್ಕೆ ಸರ್ವರೂ ಸಮಾನರು ಎಂಬ ಸಂದೇಶ ರವಾನೆಯಾಗುತ್ತದೆ. ಈ ಬಾರಿಯಾದರೂ ಅಂತಹ ವಿವೇಚನೆಯನ್ನು ಬೆಳೆಸಿಕೊಂಡು ಮತದಾನ ಮಾಡಬೇಕು. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಅದನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಬದ್ಧರಾಗೋಣ ಎಂದು ಕರೆ ನೀಡಿದರು.
ಮಹಾತ್ಮ ಗಾಂಧಿ ಅವರು ದೇಶಾದ್ಯಂತ ತುಂಡು ಬಟ್ಟೆಯಲ್ಲಿ, ಕಾಲಿಗೆ ಚಪ್ಪಲಿಯಿಲ್ಲದೆ ಅಲೆದಾಡಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಆ ಶ್ರಮಕ್ಕೆ ನಾವೆಷ್ಟು ಬೆಲೆ ಕೊಡುತ್ತಿದ್ದೇವೆ ಎಂದು ಎಲ್ಲರು ತಮ್ಮಲ್ಲೇ ಪ್ರಶ್ನಿಸಿಕೊಳ್ಳಬೇಕು ಎಂದರು.
ಆಚರಣೆ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ಉಪಾಧ್ಯಕ್ಷರುಗಳಾದ ಮೋಹನ್ ದಾಸರಿ, ವಿಜಯ್ ಶರ್ಮಾ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕುಶಲ ಸ್ವಾಮಿ, ಸಾಂಸ್ಕೃತಿಕ ಘಟಕದ ರಾಜ್ಯಾಧ್ಯಕ್ಷೇ ಸುಷ್ಮಾ ವೀರ್, ಎಸ್ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಪುರುಷೋತ್ತಮ, ಬೆಂಗಳೂರು ನಗರ ಅಧ್ಯಕ್ಷ ಡಾಕ್ಟರ್ ಸತೀಶ್ ಕುಮಾರ್ ಸೇರಿದಂತೆ ಬಸವರಾಜ್ ಮುದಿಗೌಡರ್, ಜಗದೀಶ್ ಚಂದ್ರ, ದರ್ಶನ್ ಜೈನ್ ಅನಿಲ್ ನಾಚಪ್ಪ ಹಾಗೂ ಇನ್ನಿತರ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳ ಭಾಗವಹಿಸಿದ್ದರು.