ಬೆಂಗಳೂರು ;- ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಶ್ರೀದೇವಿ ಎಂಬ ಮಹಿಳೆ ಬಾಡಿಗೆ ಕೇಳಿದ್ದು, ಮುಖ ಕೊಯ್ದುಹಾಕಿದ ಬಾಡಿಗೆದಾರನ ಹೆಸರು ಸದ್ದಾಂ ಎಂದು ಹೇಳಲಾಗಿದೆ.
ಶ್ರೀದೇವಿ ಅವರು ಇಲ್ಲಿನ ಫಯಾಜ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಶ್ರೀದೇವಿ ವಾಸವಾಗಿರುವ ಬಾಡಿಗೆ ಮನೆಯಲ್ಲೇ ನಜೀರ್ ಎಂಬಾತನೂ ವಾಸವಾಗಿದ್ದಾನೆ. ಅವರು ನೀಡುತ್ತಿದ್ದ ಬಾಡಿಗೆಯನ್ನ ಕಲೆಕ್ಟ್ ಮಾಡಿ ಬೇರೆ ರಾಜ್ಯದಲ್ಲಿರುವ ಫಯಾಜ್ಗೆ ಶ್ರೀದೇವಿ ನೀಡುತ್ತಿದ್ದರು.
ಆದ್ರೆ ನಜೀರ್ ಮೂರು ತಿಂಗಳಿನಿಂದ ಬಾಡಿಗೆ ನೀಡಿರಲಿಲ್ಲ. ಹೀಗಾಗಿ ಬಾಡಿಗೆ ನೀಡುವಂತೆ ಶ್ರೀದೇವಿ ಜೋರು ಧ್ವನಿಯಲ್ಲಿ ಕೇಳಿದ್ದಾರೆ. ಆ ವಿಚಾರವನ್ನು ನಜೀರ್ ತನ್ನ ಮಗ ಸದ್ದಾಂ ಬಳಿ ಚಾಡಿ ಹೇಳಿದ್ದಾನೆ. ಆಕ್ರೋಶದಿಂದ ಶ್ರೀದೇವಿ ಮನೆ ಬಳಿ ಹೋದ ಸದ್ದಾಂ ಶ್ರೀದೇವಿ ಜೊತೆ ಕಿರಿಕ್ ತೆಗೆದು ಚಾಕುವಿನಿಂದ ಮುಖ, ಕೈ ಕೊಯ್ದುಹಾಕಿದ್ದಾನೆ.
ಘಟನೆ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಂಡೇಪಾಳ್ಯ ಪೊಲೀಸರು ಆರೋಪಿ ಸದ್ದಾಂನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಈ ನಡುವೆ ಬಂಡೆಪಾಳ್ಯ ಪೊಲೀಸರು ಶ್ರೀದೇವಿ ಬಳಿ ಹಣ ಕೇಳಿರುವ ಆರೋಪವೂ ಕೇಳಿಬಂದಿದೆ. ದೂರು ಇತ್ಯಾದಿ ಜೆರಾಕ್ಸ್ ಮಾಡಿಸಲು ಖರ್ಚಾಗುತ್ತೆ. ಆರು ಸಾವಿರ ಹಣ ಕೊಡಿ ಎಂದು ಬಂಡೆಪಾಳ್ಯ ಪೊಲೀಸರು ಕೇಳಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವಿಜಯ್ ಜೊತೆ ಶ್ರೀದೇವಿ ಸಂಬಂಧಿಕ ಅರವಿಂದ್ ಎಂಬವರು ಮಾತಾಡಿರುವ ಆಡಿಯೋದಲ್ಲಿ ಆರೋಪಿಸಲಾಗಿದೆ. ಹಣ ಕೇಳಿರುವ ಬಗ್ಗೆ ಆಡಿಯೋದಲ್ಲಿ ಅರವಿಂದ್ ಪ್ರಸ್ತಾಪಿಸಿದ್ದಾರೆ