ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ʼಗೆ ಮೂರು ವರ್ಷದ ಕಂದಮ್ಮ ಬಲಿಯಾಗಿರುವ ಘಟನೆ ನಗರದ ಹುಳಿಮಾವು ಸಂಚಾರ ಠಾಣೆ ವ್ಯಾಪ್ತಿಯಲ್ಲಿನಡೆದಿದೆ. 3 ವರ್ಷದ ಅಯಾನ್ ಪಾಷಾ ಮೃತಪಟ್ಟ ಮಗು. ಅಯಾನ್, ಮಂಡ್ಯ ಜಿಲ್ಲೆ ಮದ್ದೂರಿನ ಆಯಿಷಾ ಮತ್ತು ನಯೀಂ ಪಾಷಾ ದಂಪತಿಯ ಮಗು.
ಆಯಿಷಾ, ಮಗುವನ್ನು ನಗರದ ಸಿಂಗಸಂದ್ರದಲ್ಲಿರುವ ತಮ್ಮ ಅಕ್ಕ ಗವರ್ ಉನ್ನಿಸಾ ಅವರ ಮನೆಯಲ್ಲಿ ಬಿಟ್ಟಿದ್ದರು. ಉನ್ನಿಸಾ ಅವರು ಮಗುವನ್ನು ದ್ವಿಚಕ್ರ ವಾಹನದಲ್ಲಿ ಹಿಂದೆ ಕೂರಿಸಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಉನ್ನಿಸಾ ಅವರು ಟ್ರಾಫಿಕ್ ಸಿಗ್ನಲ್ನಲ್ಲಿ ದ್ವಿಚಕ್ರ ವಾಹನವನ್ನು ಮುಂದಕ್ಕೆ ಚಾಲನೆ ಮಾಡುತ್ತಿದ್ದಂತೆ ಮಗು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಅದೇ ವೇಳೆಗೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಮಗು ಮೇಲೆ ಹರಿದಿದೆ. ಉನ್ನಿಸಾ ಅವರ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ. ಮಗು ಮೇಲೆ ಹರಿದ ಬಸ್ ಅತ್ತಿಬೆಲೆಯಿಂದ ಮೆಜೆಸ್ಟಿಕ್’ಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.