ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿಗಳ ಜೊತೆ ನಿನ್ನೆ ಪರಾಮರ್ಶೆ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಭಾರಿಗಳು ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿಗಳು ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟರು. ಈ ಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧವೇ ಎಂಟಿಬಿ ನಾಗರಾಜ್ ಗರಂ ಆದರು. ತಮ್ಮ ಡಬಲ್ ಸೋಲಿನ ಬಗ್ಗೆ ಸಭೆಯಲ್ಲಿ ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಲ್ಲಿದ್ದಾಗ ನಾನು ಮೂರು ಸಲ ಗೆದ್ದಿದ್ದೆ. ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು ಎಂದು ಅಸಮಾಧಾನ ಹೊರಹಾಕಿದರು. ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದರು. ಮಾಜಿ ಸಚಿವ ಡಾ.ಕೆ.ಸುಧಾಕರ್ ಮೇಲೂ ಸಿಟ್ಟಾದ ಎಂಟಿಬಿ, ಸುಧಾಕರ್‌ನಿಂದಾಗಿಯೇ ನಾನು ಸೋತಿದ್ದು, ಸುಧಾಕರ್ ತಾವೂ ಸೋತು, ನಮ್ಮನ್ನೂ ಸೋಲಿಸಿದರು. ನಾನು ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಲು ಸುಧಾಕರ್ ಸಹ ಕಾರಣ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನವರು ಹತ್ತು ಕೆಜಿ ಅಕ್ಕಿ ಕೊಡ್ತಿದ್ರು. ನೀವು ಆರು ಕೆಜಿ ಅಕ್ಕಿ ಕೊಟ್ರಿ, ಬಡವರು ಇದರಿಂದ ಸಿಟ್ಟಾಗಿದ್ರು. ನನ್ನ ಕ್ಷೇತ್ರದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಗ್ಯಾರಂಟಿಯೂ ನನ್ನ ಸೋಲಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.