ಗದಗ: ಕಾಂಗ್ರೆಸ್ (Congress) ಮುಖಂಡನ ಹೆಸರನ್ನ ಡೆತ್ ನೋಟ್‌ನಲ್ಲಿ (Death Note) ಬರೆದಿಟ್ಟು ವೈದ್ಯ ಆತ್ಮಹತ್ಯೆ (Suicide) ಶರಣಾಗಿರುವ ಘಟನೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ. ಡಾ. ಶಶಿಧರ ಹಟ್ಟಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಲುಂಗಿಯಿಂದ ನೇಣಿಗೆ ಶರಣಾಗಿದ್ದಾರೆ. ಮರಳು ದಂಧೆಯಲ್ಲಿ ಪಾಲುದಾರಾಗಿದ್ದ ಶರಣಗೌಡ ಪಾಟೀಲ್ ಹಾಗೂ ತನ್ನ ನಡುವೆ ಉಂಟಾದ ಹಣಕಾಸಿನ ಒತ್ತಡಕ್ಕೆ ವೈದ್ಯ ಶಶಿಧರ ಬಲಿಯಾಗಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ರೋಣ ತಾಲೂಕಿನ ಹೊಳೆಮಣ್ಣೂರು ಬಳಿ ಮರಳಿನ ಪಾಯಿಂಟ್ ಮಾಡಿಕೊಂಡಿದ್ದರು
ಇದರಲ್ಲಿ ರಾಜು ಶಿರಗುಂಪಿ, ಅಶೋಕ ವಾಸವಿ ಶೆಟ್ಟರ್, ಗಜೇಂದ್ರಗಡ ತಾಲೂಕಿನ ಸರ್ಜಾಪೂರ ಗ್ರಾಮದ ಶರಣಗೌಡ ಎಲ್ ಪಾಟೀಲ ಹಾಗೂ ಇನ್ನೂ ಕೆಲವರ ಜೊತೆ ವೈದ್ಯ ಶಶಿಧರ ಮರಳು ವ್ಯವಹಾರ ಮಾಡುತ್ತಿದ್ದರು. ಆರೋಪಿ ಶರಣಗೌಡ ಪಾಟೀಲ, ವೈದ್ಯ ಶಶಿಧರಗೆ ನಿತ್ಯವೂ ಮರಳಿನ ವ್ಯವಹಾರದ ಲೆಕ್ಕ ಪತ್ರ, ಹಣ ಕೊಡುವಂತೆ ಒತ್ತಡ ಹಾಕುತ್ತಿದ್ದರು. ನಿತ್ಯ ಹಣ ಕೊಡಲೇಬೇಕು ಎಂದು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದರು ಎಂದು ಶಶಿಧರ್ ಹಟ್ಟಿ ಆರೋಪಿಸಿದ್ದಾರೆ.
ಡೆತ್ ನೋಟ್ನಲ್ಲಿ ಏನಿದೆ?
ಡೈರಿಯ ಮೊದಲ ಪುಟದಲ್ಲಿ ದನದಾಹಿ ಶರಣಗೌಡನಿಗೆ ಧಿಕ್ಕಾರ, ದನ ಪಿಶಾಚಿ ಶರಣಗೌಡನಿಗೆ ಬೋಮ್ಮಸಾಗರ ದುರ್ಗಮ್ಮನ ಶಾಪ ತಟ್ಟಲಿ. ಮೇಲೆ ಬಸಪ್ಪ ಒಳಗೆ ವಿಷಪ್ಪನಾದ ಶರಣಗೌಡನೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದು ಆರೋಪಿಸಿದ್ದಾರೆ. ಘಟನೆ ಕುರಿತು ಶಶಿಧರ ಪತ್ನಿ ದೂರು ನೀಡಿದ್ದು, ರೋಣ ಪೊಲೀಸ್ ಠಾಣೆಯಲ್ಲಿ ಶರಣಗೌಡ ಪಾಟೀಲ ವಿರುದ್ಧ ಪ್ರಕರಣ ದಾಖಲಾಗಿದೆ.