ತಿರುವನಂತಪುರಂ: ಚಕ್ಕುಲಿ (Murukku) ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಪುಟ್ಟ ಕಂದಮ್ಮ ದುರ್ಮರಣಕ್ಕೀಡಾದ ಘಟನೆ ಕೇರಳದಲ್ಲಿ (Kerala) ನಡೆದಿದೆ. ಮೃತ ಬಾಲಕನನ್ನು ವೈಷ್ಣವ್ ಎಂದು ಗುರುತಿಸಲಾಗಿದೆ. ಮೃತ ವೈಷ್ಣವ್, ಮಂಕಂಕುಜಿ ಮಲಯಿಲ್ ಪಾಡೆತತ್ತಿಲ್ ಹೌಸ್‍ನ ವಿಜೀಶ್ ಮತ್ತು ದಿವ್ಯಾ ದಾಸ್ ಅವರ ಅವಳಿ ಮಕ್ಕಳಲ್ಲಿ ಒಬ್ಬರು. ಈ ಘಟನೆ 9.30ರ ಸುಮಾರಿಗೆ ನಡೆದಿದೆ. ಘಟನೆ ಸಂದರ್ಭದಲ್ಲಿ ಮಗು ಹಾಗೂ ಆತನ ತಾಯಿ ದಿವ್ಯಾ ಮಾತ್ರ ಮನೆಯಲ್ಲಿದ್ದರು. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು,
ಪಾಲಕ್ಕಾಡ್‍ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಕ್ಕೆ ತೆರಳಿದ್ದರು. ಬಾಲಕ ಚಕ್ಕುಲಿಯನು ತಿಂದುಕೊಂಡು ತನ್ನ ಪಾಡಿಗೆ ಆಟವಾಡುತ್ತಿದ್ದನು. ಈ ವೇಳೆ ಏಕಾಏಕಿ ಚಕ್ಕುಲಿಯನ್ನು ನುಂಗಿಬಿಟ್ಟಿದ್ದಾನೆ. ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಆತನಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಆತನನ್ನು ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈಷ್ಣವ್‍ನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವಳಿ ಸಹೋದರಿ ವೈಗಾ ಹಾಗೂ ತಂದೆ, ತಾಯಿಯನ್ನು ವೈಷ್ಣವ್ ಅಗಲಿದ್ದಾನೆ.