ಹಾಸನ: ಮದ್ಯ ಸೇವಿಸುವ ಚಾಲೆಂಜ್ ನಲ್ಲಿ ವ್ಯಕ್ತಿ ರಕ್ತಕಾರಿ ಸಾವನಪ್ಪಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಮೃತ ವ್ಯಕ್ತಿಯನ್ನು ತಿಮ್ಮೇಗೌಡ (60) ಎಂದು ಗುರುತಿಸಲಾಗಿದೆ. ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡರ ನಡುವೆ ಮೂವತ್ತು ನಿಮಿಷದಲ್ಲಿ 90 ಎಂಲ್ನ ಹತ್ತು ಪ್ಯಾಕೆಟ್ ಮದ್ಯ ಕುಡಿಯುವ ಪಂಥ ಕಟ್ಟಿದ್ದರು. ಇಬ್ಬರಿಗೂ ಕೃಷ್ಣೇಗೌಡ ಮದ್ಯದ ಪ್ಯಾಕೆಟ್ಗಳನ್ನು ನೀಡಿದ್ದ ಎಂದು ಆರೋಪಿಸಲಾಗಿದೆ. ಚಾಲೆಂಜ್ಗಾಗಿ ಮದ್ಯ ಕುಡಿದು ರಕ್ತ ವಾಂತಿ
ಮಾಡಿಕೊಂಡ ತಿಮ್ಮೇಗೌಡ ವಾಂತಿ ಮಾಡುತ್ತಲೇ ಬಸ್ ನಿಲ್ದಾಣದಲ್ಲೇ ಬಿದ್ದಿದ್ದ. ಈ ವೇಳೆ ಸ್ಥಳದಿಂದ ದೇವರಾಜು ಮತ್ತು ಕೃಷ್ಣೇಗೌಡ ಪರಾರಿಯಾಗಿದ್ದರು ಎಂದು ದೂರಲಾಗಿದೆ. ಕುಡಿದು ಬಿದ್ದಿದ್ದ ತಿಮ್ಮೇಗೌಡನ ಶವವನ್ನು ಗ್ರಾಮಸ್ಥರು ಆತನ ಮನೆಗೆ ತಂದಿದ್ದಾರೆ. ಕೃಷ್ಣಗೌಡ ಮತ್ತು ದೇವರಾಜ್ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ದೇವರಾಜ್ ಹಾಗೂ ಕೃಷ್ಣೇಗೌಡ ಎಂಬುವವರ ವಿರುದ್ಧ ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.