ಅಮರಾವತಿ: ಆಂಧ್ರಪ್ರದೇಶದ ತಿರುಪತಿಯ ಪ್ರಸಿದ್ಧ ತಿರುಮಲ ದೇವಾಲಯದ ಬಳಿ 6 ವರ್ಷದ ಬಾಲಕಿಯನ್ನು ಕೊಂದಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕಳೆದ ವಾರ 6 ವರ್ಷದ ಬಾಲಕಿ ಲಕ್ಷಿತಾ ತನ್ನ ಪೋಷಕರೊಂದಿಗೆ ತಿರುಮಲ ಬೆಟ್ಟಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು. ಬಾಲಕಿ ಪೋಷಕರೊಂದಿಗೆ ಪಾದಯಾತ್ರೆಯಲ್ಲಿದ್ದಾಗ ಆಕೆ ಕಾಡಿಗೆ ಹೋಗಿದ್ದಾಳೆ ಎಂದು ಶಂಕಿಸಲಾಗಿದೆ. ಬಳಿಕ ತಿರುಪತಿಯ ಬೆಟ್ಟದ ದೇಗುಲಕ್ಕೆ ಹೋಗುವ ಪಾದಾಚಾರಿ ಮಾರ್ಗದಲ್ಲಿ ಪೊದೆ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ಮೃತದೇಹದ ಮೇಲೆ ಕಾಡು ಪ್ರಾಣಿ ದಾಳಿ ಮಾಡಿದ್ದ ಗಾಯದ ಗುರುತುಗಳು ಪತ್ತೆಯಾಗಿತ್ತು.
ಇದಾದ ಬಳಿಕ ಪ್ರದೇಶದಲ್ಲಿ 12 ಕ್ಯಾಮೆರಾಗಳನ್ನು ಅಳವಡಿಸಲಾಗತ್ತು. ಶನಿವಾರ ರಾತ್ರಿ ಪ್ರದೇಶದಲ್ಲಿ ಚಿರತೆಯ ಚಲನವಲನ ದಾಖಲಾಗಿತ್ತು. ಬಳಿಕ ಅರಣ್ಯಾಧಿಕಾರಿಗಳು ಬೋನು ಹಾಕಿ ಇದೀಗ ಚಿರತೆಯನ್ನು ಸೆರೆಹಿಡಿದಿದ್ದಾರೆ. ಬಾಲಕಿಯ ಸಾವಿನ ಬಳಿಕ ಮಕ್ಕಳೊಂದಿಗೆ ಟ್ರಕ್ಕಿಂಗ್ ತೆರಳುವಾ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿರುಮಲ ತಿರುಪತಿ ದೇವಸ್ಥಾನ ಪೋಷಕರಲ್ಲಿ ಕೇಳಿಕೊಂಡಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಯಾತ್ರಾರ್ಥಿಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಮಾತ್ರ ಪಾದಯಾತ್ರೆ ಮಾಡಬಹುದು ಎಂದು ದೇವಾಲಯದ ಆಡಳಿತ ತಿಳಿಸಿದೆ. ಇಷ್ಟು ಮಾತ್ರವಲ್ಲದೇ ದ್ವಿಚಕ್ರ ವಾಹನ ಸಂಚಾರವನ್ನು ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ನಿರ್ಬಂಧಿಸಲಾಗಿದೆ.