ದಾವಣಗೆರೆ: ದೇಶ ವಿಭಜನೆ ಬಗ್ಗೆ ಮಾತನಾಡುವ ಸಂಸದ ಡಿ. ಕೆ. ಸುರೇಶ್, ಶಾಸಕ ವಿನಯ್ ಕುಲಕರ್ಣಿ ಅವರು ದೇಶದ್ರೋಹಿಗಳು. ಇಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಬೇಕು ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು.
ದಾವಣಗೆರೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಈಶ್ವರಪ್ಪ, ಇಂಥ ರಾಷ್ಟ್ರದ್ರೋಹಿಗಳನ್ನು ಪಕ್ಷದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಾಕತ್ತಿದ್ದರೆ ಕಿತ್ತು ಹಾಕಲಿ ಎಂದು ಸವಾಲು ಹಾಕಿದರು.
ಮಲ್ಲಿಕಾರ್ಜುನ್ ಖರ್ಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತ ಇರುತ್ತದೆ. ಇದನ್ನು ವಿಭಜಿಸಲು ಸಾಧ್ಯವಿಲ್ಲ, ನಮ್ಮ ಸಹಕಾರವೂ ಇಲ್ಲ ಎಂದಿದ್ದಾರೆ. ಆದ್ರೆ, ದಕ್ಷಿಣ ಭಾರತ ಪ್ರತ್ಯೇಕ ಮಾಡಬೇಕು ಎಂದಿರುವ ಡಿ. ಕೆ. ಸುರೇಶ್ ಹಾಗೂ ವಿನಯ್ ಕುಲಕರ್ಣಿ ಅವರಂಥವರಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನೊಂದು ಬಾರಿ ಈ ರೀತಿ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದರು.