ಬೆಂಗಳೂರು ಗ್ರಾಮಾಂತರ: ತನ್ನ ಮಗಳ ಪ್ರೀತಿಯಿಂದ ಮನನೊಂದು ತಂದೆ ಮರ್ಯಾದೆಗೆ ಅಂಜಿ ಮಗಳನ್ನೇಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ. ಮಗಳ ಪ್ರೀತಿ ವಿಚಾರ ತಿಳಿದ ತಂದೆ, ಮರ್ಯಾದೆ ತೆಗೆದಳು ಅಂತ ಕೊಲೆಯೇ ಮಾಡಿದ್ದಾನೆ.ಕವನಾ (20) ಹತ್ಯೆಯಾದ ಯುವತಿ. ತನ್ನ ಮಗಳನ್ನು ಹತ್ಯೆಗೈದ ಬಳಿಕ ಆರೋಪಿ ಮಂಜುನಾಥ್ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮಂಜುನಾಥ್ ಅವರ ಕಿರಿಯ ಮಗಳು ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರನ ಜೊತೆಗೆ ಹೋಗುವುದಾಗಿ ಕಳೆದ ಮಂಗಳವಾರ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಳು. ಪ್ರೀತಿಸಿದವನ ಜೊತೆ ಹೋಗುವುದಾಗಿ ಠಾಣೆಯಲ್ಲಿ ಪಟ್ಟು ಹಿಡಿದಿದ್ದು, ಪೊಲೀಸರು ಆಕೆಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಹಿರಿ ಮಗಳು ಸಹ ಪ್ರೀತಿ ಬಲೆಯಲ್ಲಿರುವ ವಿಚಾರ ತಿಳಿದಿದ್ದ ತಂದೆ ಮಂಜುನಾಥ್, ಚಿಕ್ಕ ಮಗಳು ಮರ್ಯಾದೆ ಕಳೆದಳು, ಇನ್ನು ಇವಳು ಕೂಡ ಗ್ರಾಮದಲ್ಲಿ ನಮ್ಮ ಮರ್ಯಾದೆ ಕಳೆಯುತ್ತಾಳೆ ಅಂತ ಹಿರಿ ಮಗಳನ್ನು ಕೊಲೆ ಮಾಡಿದ್ದಾನೆ.