ಬೆಂಗಳೂರು;- ನನ್ನ ಬಗ್ಗೆ ಮಾತನಾಡಿದವರ ಮೇಲೆ ಸಾಕಷ್ಟು ಹಗರಣಗಳ ಆರೋಪ ಇದೆ ಎಂದು ಬಿಕೆ ಹರಿಪ್ರಸಾದ್ ಅವರು ಹೇಳಿದರು. ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರಿಗೆ ಸಿಎಂ ಸಿದ್ದರಾಮಯ್ಯ ದೂರು ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಎಲ್ಲರೂ ದೂರು ನೀಡಲಿ. ಅದು ನನಗೆ ಸಂತೋಷ. ಅದುವೇ ಪ್ರಜಾಪ್ರಭುತ್ವ. ಆದರೆ, ದೂರು ನೀಡುವವರು ತಾವೇನು ಅಂತ ತಿಳಿದುಕೊಳ್ಳಲಿ ಎಂದು ಅವರು ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು. ಬಿ.ಕೆ.ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿರುವ ಕಾಂಗ್ರೆಸ್ ಶಾಸಕ ನಂಜೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತುಂಬ ಸಂತೋಷ. ಅವರಿಗೆ ಒಳ್ಳೆಯದಾಗಲಿ. ನನ್ನ ಬಗ್ಗೆ ಮಾತನಾಡಿದವರ ಮೇಲೆ ಸಾಕಷ್ಟು ಹಗರಣಗಳ ಆರೋಪ ಇದೆ.
ಅವರು ಈ ಎಲ್ಲ ಹಗರಣದಿಂದ ಪಾರಾಗಲು ಹೀಗೆಲ್ಲ ಹೇಳುತ್ತಿರಬಹುದು. ಅದರಿಂದ ಅವರು ಪಾರಾಗ್ತಾರಾ? ಎಂದು ಪ್ರಶ್ನಿಸಿದ ಹರಿಪ್ರಸಾದ್, ಆ ಧೈರ್ಯ ಇದ್ದರೆ ಅವರು ಮಾತನಾಡಲಿ ಎನ್ನುವ ಮೂಲಕ ಪರೋಕ್ಷವಾಗಿ ಅರ್ಕಾವತಿ ಹಗರಣ ಪ್ರಸ್ತಾಪಿಸಿ, ಸ್ವ ಪಕ್ಷದ ಶಾಸಕರಿಗೆ ಟಾಂಗ್ ನೀಡಿದರು. ಎಚ್. ವಿಶ್ವನಾಥ ಟೀಕೆ ವಿಚಾರವಾಗಿ ಮಾತನಾಡಿ, ವಿಶ್ವನಾಥ ಯಾವ ಪಕ್ಷದಲ್ಲಿದ್ದಾರೆ? ನಮ್ಮ ಪಕ್ಷದಲ್ಲಿ ಇದ್ದಾರಾ ಈಗ? ಎಂದು ಪ್ರಶ್ನಿಸಿದರು. ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಸರ್ಕಾರ ಇನ್ನೂ ಮೂರು ತಿಂಗಳು ಮಾತ್ರ ಇರೋದು ಎಂದಿರುವುದಕ್ಕೆ ಉತ್ತರಿಸಿದ ಅವರು, ಸರ್ಕಾರ ಪತನ ಆಗುತ್ತದೆ ಎಂದು ಬಿಜೆಪಿಗರು ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಕಿತ್ತಾಟವಿಲ್ಲ ಎಂದರು.