ಪಾಕಿಸ್ತಾನ ವಿರುದ್ಧ ಭಾರತಕ್ಕೆ 228 ರನ್ ಗಳ ದಾಖಲೆಯ ಗೆಲುವು

ಕೊಲಂಬೊ: ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಶತಕಗಳ ಬ್ಯಾಟಿಂಗ್ ಅಬ್ಬರ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ಬೌಲಿಂಗ್ ದಾಳಿ ನೆರವಿನಿಂದ ಟೀಂ ಇಂಡಿಯಾ ಪಾಕಿಸ್ತಾನ ತಂಡದ ವಿರುದ್ಧ 228 ರನ್ಗಳ ಭರ್ಜರಿ ಜಯ ಸಾಧಿಸಿದೆ. ಪಾಕಿಸ್ತಾನ ತಂಡ ಹೀನಾಯ ಸೋಲನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತ್ತು. 357 ರನ್ಗಳ ಗುರಿ ಬೆನ್ನಟ್ಟಿದ ಪಾಕ್ ತಂಡ ಭಾರತದ ಸಂಘಟಿತ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲವಾಯಿತು. 32 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಪಾಕ್ ಕೇವಲ 128 ರನ್ ಗಳಿಸಿ ಆಲೌಟ್ ಆಯ್ತು. ಕಾರಣಾಂತರದಿಂದ ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಬ್ಯಾಟಿಂಗ್ಗೆ ಬಂದಿರಲಿಲ್ಲ

ಆರಂಭದಲ್ಲೇ 44 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಪಾಕ್ ಸಂಕಷ್ಟಕ್ಕೀಡಾಗಿದ್ದಾಗಲೇ ಮಳೆ ಶುರುವಾಯಿತು. ಇದರಿಂದ ಓವರ್ ಕಡಿತಗೊಳಿಸುವ ನಿರ್ಧಾರ ಮಾಡಲಾಗಿತ್ತು. ಬಳಿಕ ಮಳೆ ಬಿಡುವು ನೀಡಲಾಗಿ ಪಂದ್ಯ ಮುಂದುವರಿಸಲಾಯಿತು. ಮೊದಲ 15 ಓವರ್ಗಳಲ್ಲಿ ಕೇವಲ 65 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಪಾಕ್ 24 ಓವರ್ಗಳಲ್ಲಿ 5 ವಿಕೆಟ್ಗಳನ್ನ ಕಳೆದುಕೊಂಡಿದ್ದರೂ 100 ರನ್ಗಳ ಗಡಿ ದಾಟುವಲ್ಲಿ ವಿಫಲವಾಗಿತ್ತು. ಇದರಿಂದ ಗೆಲುವಿನ ವಿಶ್ವಾಸ ಕಳೆದುಕೊಂಡಿತು. ಪಾಕ್ ಪರ ಫಖಾರ್ ಜಮಾನ್ 27 ರನ್, ಇಮಾಮ್ ಉಲ್ ಹಕ್ 9 ರನ್, ಬಾಬರ್ ಆಜಂ 10 ರನ್, ಅಘಾ ಸಲ್ಮಾನ್ ಹಾಗೂ ಇಫ್ರಿಕಾರ್ ಅಹ್ಮದ್ ತಲಾ 23 ರನ್ ಗಳಿಸಿದರು. ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದಿಂದ ಪಾಕ್ ತಂಡ ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಬೇಕಾಯ್ತು.

ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 8 ಓವರ್ಗಳಲ್ಲಿ 25 ರನ್ ನೀಡಿ 5 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಭಾರತ 24.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 8 ರನ್ ಗಳಿಸಿದ್ದರೆ, ಕೆ.ಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಆದ್ರೆ ಭಾನುವಾರ ಪದ್ಯಕ್ಕೆ ಮಳೆ ಅಡ್ಡಿಯಾದ್ದರಿಂದ ಸೋಮವಾರ ಪಂದ್ಯವನ್ನು ಮುಂದುವರಿಸಲಾಯಿತು. ಇಂದು ಕ್ರೀಸ್ ಮುಂದುವರಿಸಿದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಜೋಡಿ ಪಾಕ್ ಬೌಲರ್ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿತು. ಸಿಕ್ಸರ್, ಬೌಂಡರಿ ಸಿಡಿಸುತ್ತಾ ಅಭಿಮಾನಿಗಳಿಗೆ ರಸದೌತಣ ನೀಡಿತು. ಮುರಿಯದ 3ನೇ ವಿಕೆಟ್ಗೆ ಈ ಜೋಡಿ 194 ಎಸೆತಗಳಲ್ಲಿ ಬರೋಬ್ಬರಿ 233 ರನ್ ಕಲೆಹಾಕಿತು.ಪಾಕಿಸ್ತಾನ ವಿರುದ್ಧ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 129.78 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 122 ರನ್ (9 ಬೌಂಡರಿ, 3 ಸಿಕ್ಸರ್) ಚಚ್ಚಿದರೆ, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 104.71 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ 106 ಎಸೆತಗಳಲ್ಲಿ 111 ರನ್ (12 ಬೌಂಡರಿ, 2 ಸಿಕ್ಸರ್) ಬಾರಿಸುವ ಮೂಲಕ ತಂಡದ ಮೊತ್ತವನ್ನ 350ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

Loading

Leave a Reply

Your email address will not be published. Required fields are marked *