ಹುಬ್ಬಳ್ಳಿ: ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಜೆಡಿಎಸ್ ಮತ್ತು ಬಿಜೆಪಿಗೆ ಬಿಟ್ಟ ವಿಚಾರ. ಹಿಂದೆಯೂ ಮೈತ್ರಿ ಮಾಡಿಕೊಳ್ಳುತ್ತೇವೆ ಅಂದರು ನಂತರ ಅದಕ್ಕೆ ಬ್ರೇಕ್ ಆಯ್ತು. ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಪರಸ್ಪರ ಫೈಟ್ ಮಾಡಿದ್ದರು. ಈಗ ಮತ್ತೆ ಮೈತ್ರಿ ವಿಚಾರ ಮಾತಾಡುತ್ತಿದ್ದಾರೆ. ಅನುಕೂಲವಿದ್ದಾಗ ಮೈತ್ರಿ ಮಾಡಿಕೊಳ್ಳುವುದು, ಅನಾನುಕೂಲವಾದಾಗ ಮೈತ್ರಿಯಿಂದ ಹಿಂದೆ ಸರಿಯುವುದು. ಈ ರೀತಿ ಮಾಡಿದಾಗ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಆಯಾ ಪಕ್ಷಗಳ ಕ್ರೆಡಿಬಿಲಿಟಿ ಸಹ ಹೋಗುತ್ತೆ ಎಂದರು.