ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವತ್ತೂ ಭಾಗವಹಿಸದ ಬಿಜೆಪಿ ಪರಿವಾರ ಸ್ವಾತಂತ್ರ್ಯ ಸೇನಾನಿ ಮಹಾತ್ಮಗಾಂಧಿಯನ್ನು ಹತ್ಯೆಗೈದವರ ವಂಶಸ್ಥರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಭಾರತದ ಸೌಹಾರ್ದ ಮತ್ತು ಮಾನವೀಯ ಪರಂಪರೆಯನ್ನು ಮರು ಜೋಡಣೆ ಮಾಡುವ ಸಲುವಾಗಿ ನಡೆದ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ರಾಮನಗರದಲ್ಲಿ ಹಮ್ಮಿಕೊಂಡಿದ್ದ 5 km ಪಾದಯಾತ್ರೆಯಲ್ಲಿ ಸಹಸ್ರಾರು ಕಾರ್ಯಕರ್ತರ ಜತೆ ಹೆಜ್ಜೆ ಹಾಕಿದ ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅತ್ಯಂತ ಧರ್ಮವಂತರಾಗಿ ಬದುಕುತ್ತಿದ್ದ ಪುಣ್ಯಾತ್ಮ ಮಹಾತ್ಮಗಾಂಧಿಯನ್ನು ಗುಂಡಿಟ್ಟು ಕೊಲ್ಲುವಂಥಾದ್ದು ಏನಾಗಿತ್ತು ? ಗಾಂಧಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದೇ ತಪ್ಪಾಯ್ತಾ ? ಗಾಂಧಿ ಬ್ರಿಟಿಷರನ್ನು ವಿರೋಧಿಸಿದರು ಎನ್ನುವ ಕಾರಣಕ್ಕೆ ಗಾಂಧಿಯನ್ನು ಕೊಂದಿದ್ದಾ ? ಎಂದು ಬಿಜೆಪಿ ಪರಿವಾರವನ್ನು ಪ್ರಶ್ನಿಸಿದರು.
ಮೋದಿ ಅವರು ಪ್ರಧಾನಿ ಆದ ಬಳಿಕ ಭಾರತೀಯರ ಭಾವನೆಗಳನ್ನು ಕೆರಳಿಸಿ, ಭಾರತೀಯ ಸಮಾಜವನ್ನು ವಿಭಜಿಸಿ, ಭಾರತೀಯರ ಹೃದಯಗಳನ್ನು ಒಡೆಯುವ ಮೂಲಕ ಎಷ್ಟಾಗುತ್ತೋ ಅಷ್ಟು ಮತ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಭಾರತೀಯರನ್ನು ವಿಭಜಿಸಿ, ಹಿಂಸಿಸಿ ಮತ ಗಳಿಸುವ ದುರ್ಗತಿ ಬಿಜೆಪಿ ಗೆ ಬಂದಿದೆ ಎಂದು ಟೀಕಿಸಿದರು.
ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು, ದುಡಿಯುವ ವರ್ಗಗಳು, ಶ್ರಮಿಕರು ಆತಂಕ ಅಭದ್ರತೆಯಲ್ಲಿ ಬದುಕುವಂಥಾ ಹೀನಾಯ ಸ್ಥಿತಿಗೆ ದೇಶವನ್ನು ದೂಡಿದ್ದರು. ಭಾರತವನ್ನು ಕಟ್ಟಿದ ಸಮುದಾಯಗಳನ್ನು ಛಿದ್ರಗೊಳಿಸುವುದನ್ನು ವಿರೋಧಿಸಿ ಬೆವರಿನ ಸಂಸ್ಕೃತಿಯ ಎಲ್ಲರನ್ನೂ ಒಟ್ಟುಗೂಡಿಸುವ ಸಲುವಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಿತು ಎಂದರು.