ವದೆಹಲಿ: ಸಮರ್ಪಕ ಪ್ರಮಾಣದ ಕಾವೇರಿ ನೀರು (Kaveri Water) ಹರಿಸಲು ನಿರ್ದೇಶನ ಕೋರಿ ತಮಿಳುನಾಡು (Tamil Nadu) ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಸುಪ್ರೀಂಕೋರ್ಟ್ (Supreme Court) ಮುಂದೂಡಿದೆ. ನ್ಯಾ.ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠದ ಪೈಕಿ ಓರ್ವ ನ್ಯಾಯಾಧೀಶರು ಅನುಪಸ್ಥಿತಿಯಲ್ಲಿರುವ ಹಿನ್ನೆಲೆ ವಿಚಾರಣೆ ಮುಂದೂಡಲಾಯಿತು.
ಈ ಮೊದಲು ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ ನ್ಯಾಯಾಧೀಶರ ಅನುಪಸ್ಥಿತಿ ಹಿನ್ನೆಲೆ ಪಟ್ಟಿಯಿಂದ ಹಿಂತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆ ಉಪಸ್ಥಿತಿ ನ್ಯಾಯಾಧೀಶರ ಮುಂದೆ ತಮಿಳುನಾಡು ಪರ ವಕೀಲ ಮುಕುಲ್ ರೊಹ್ಟಗಿ ಅರ್ಜಿ ವಿಚಾರಣೆಗೆ ಪ್ರಸ್ತಾಪಿಸಿದರು. ಬುಧವಾರ ವಿಚಾರಣೆ ನಡೆಸುವುದಾಗಿ ಪೀಠ ಹೇಳಿತ್ತು. ಈಗ ಮತ್ತೆ ವಿಚಾರಣೆಯಿಂದ ಕೈಬಿಡಲಾಗಿದೆ. ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿ ನ್ಯಾ.ಬಿ.ಆರ್ ಗವಾಯಿ, ಬುಧವಾರ ನ್ಯಾ.ಪಿ ನರಸಿಂಹ ಅವರ ಅನುಪಸ್ಥಿತಿ ಇದೆ. ಈ ಹಿನ್ನೆಲೆ ವಿಚಾರಣೆಯಿಂದ ಕೈ ಬಿಟ್ಟಿದೆ. ಮುಂದಿನ ವಾರ ನಾನೂ ವಿಚಾರಣೆಗೆ ಲಭ್ಯವಿಲ್ಲ. ನೀವು ಮುಖ್ಯ ನ್ಯಾಯಾಧೀಶರ ಮುಂದೆ ಹೋಗಿ ಹೊಸ ಪೀಠಕ್ಕೆ ಮನವಿ ಮಾಡಿ ಎಂದು ಸೂಚಿಸಿದರು. ಇದಕ್ಕೆ ಒಪ್ಪದ ಎರಡೂ ರಾಜ್ಯದ ವಕೀಲರು ಹೊಸ ಪೀಠದಲ್ಲಿ ಮೊದಲಿನಿಂದ ವಿಚಾರಣೆ ಆರಂಭಿಸಬೇಕಾಗುತ್ತದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ನ್ಯಾ.ಬಿ.ಆರ್ ಗವಾಯಿ, ಹಾಗಿದ್ದರೆ ಸೆಪ್ಟೆಂಬರ್ 21ರಂದು ವಿಚಾರಣೆ ನಡೆಸುವುದಾಗಿ ಹೇಳಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪರ ಸಲ್ಲಿಸಿದ್ದ ಅರ್ಜಿ ಪ್ರಸ್ತಾಪಿಸಿದ ವಕೀಲ ವಿದ್ಯಾ ಸಾಗರ್ ಮುಖ್ಯ ಅರ್ಜಿಯೊಂದಿಗೆ ವಿಲೀನಗೋಳಿಸಲು ಮನವಿ ಮಾಡಿದರು. ಅದಕ್ಕೆ ಮುಖ್ಯ ಅರ್ಜಿ ವಿಚಾರಣೆ ವೇಳೆ ಪರಿಗಣಿಸಲಾಗುವುದು ಎಂದು ನ್ಯಾ.ಬಿಆರ್ ಗವಾಯಿ ಹೇಳಿದರು.