ನೋಂದಾಯಿಸದ ಡೀಲರ್ ಗಳ ಮೂಲಕ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡೋದು ಕಂಡುಬಂದರೆ ಅಂತಹ ಟೆಲಿಕಾಮ್ ಆಪರೇಟರ್ ಗಳಿಗೆ 10ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ಗುರುವಾರ ಸುತ್ತೋಲೆಯಲ್ಲಿ ತಿಳಿಸಿದೆ. ಸಿಮ್ ಕಾರ್ಡ್ ಗಳ ಮೋಸದ ಮಾರಾಟಕ್ಕೆ ಕಡಿವಾಣ ಹಾಕೋದು ಈ ಹೊಸ ನಿಯಮಗಳ ಉದ್ದೇಶವಾಗಿದ್ದು, ಅಕ್ಟೋಬರ್ 1ರಿಂದಲೇ ಜಾರಿಗೆ ಬರಲಿದೆ. ಹೀಗಾಗಿ ಟೆಲಿಕಾಮ್ ಆಪರೇಟರ್ ಗಳು ಎಲ್ಲ ‘ಪಾಯಿಂಟ್ ಆಫ್ ಸೇಲ್’ (ಪಿಒಎಸ್ ) ಅನ್ನು ಸೆಪ್ಟೆಂಬರ್ 30ರೊಳಗೆ ನೋಂದಾಯಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.
ಒಂದು ವೇಳೆ ಸೆಪ್ಟೆಂಬರ್ 30, 2023ರ ಬಳಿಕ ನೋಂದಣಿಯಿಲ್ಲದೆ ಗ್ರಾಹಕರನ್ನು ಸೇರಿಸಿಕೊಳ್ಳಲು ಯಾವುದೇ ಹೊಸ ಪಿಒಎಸ್ ಗೆ ಪರವಾನಗಿ ನೀಡಿರೋದು ಕಂಡುಬಂದರೆ ಪ್ರತಿ ಘಟನೆ ಮೇಲೆ ಪ್ರತಿ ಪಿಒಎಸ್ ಗೆ 10ಲಕ್ಷ ರೂ. ದಂಡವನ್ನು ಸಂಬಂಧಪಟ್ಟ ಎಲ್ ಎಸ್ ಎ (ಲೈಸೆನ್ಡ್ ಸರ್ವೀಸ್ ಏರಿಯಾ) ವಿಧಿಸುತ್ತದೆ ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಇನ್ನು ನೋಂದಣಿಯಾಗದ ಪಿಒಎಸ್ ಮೂಲಕ ಆಕ್ಟಿವೇಟ್ ಆಗಿರುವ ಎಲ್ಲ ಮೊಬೈಲ್ ಸಂಪರ್ಕಗಳನ್ನು ಪ್ರಸಕ್ತವಿರುವ ಸೂಚನೆಗಳ ಆಧಾರದಲ್ಲಿ ಮರುಪರಿಶೀಲನೆ ನಡೆಸೋದು ಅಗತ್ಯ ಎಂದು ಸುತ್ತೋಲೆ ತಿಳಿಸಿದೆ.