ಬೆಂಗಳೂರು: ಇಡೀ ದೇಶದಲ್ಲಿ ಕರ್ನಾಟಕ ಮಾಡೆಲ್ ಬಗ್ಗೆ ಮಾತಾಡ್ತಿದ್ದಾರೆ. ಬಿಜೆಪಿ ಸರ್ಕಾರ ಇರೋ ಕಡೆಯೂ ಇದನ್ನೇ ಮಾಡ್ತಿದ್ದಾರೆ. ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ನಾವು ಗ್ಯಾರಂಟಿ ಜಾರಿ ಮಾಡಿದ ಮೇಲೆ ಗ್ಯಾಸ್ ಬೆಲೆ 200 ರೂ ಇಳಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇನ್ನೂ ಬೆಂಗಳೂರಿಗೆ ನೀರಿಲ್ಲ. ಹೀಗಿರುವಾಗ ತಮಿಳುನಾಡಿಗೆ ಹೇಗೆ ನೀರು ಬಿಡೋದು? ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರಶ್ನಿಸಿದರು. ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ಅರ್ಜಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಳೆ ಬರಲಿಲ್ಲ, ಮುಂಗಾರು ವಿಫಲವಾಗಿದೆ. ಈ ನಿಟ್ಟಿನಲ್ಲಿ ನಾವು ಪ್ರಾಯೋಗಿಕವಾಗಿ ಇರಬೇಕಾಗಿದೆ ಎಂದರು. ನೀರಿಲ್ಲದಿದ್ರೂ ಕೋರ್ಟ್ ನಲ್ಲಿ ದಾವೆ ಹೂಡುತ್ತಾರೆ ಅಂದರೆ ಹೇಗೆ? ಇನ್ನೂ 25 ಟಿಎಂಸಿ ನೀರು ಬರಬೇಕಿತ್ತು.
ನಮಗೆ, ಬೆಂಗಳೂರಿಗೇ ನೀರಿಲ್ಲ, ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಹೇಗೆ ಬಿಡೋದು? ಎಂದು ಪ್ರಶ್ನಿಸಿದರು. ಐದು ಸಾವಿರ ಕ್ಯುಸೆಕ್ ನೀರು ಬಿಡುವಂತೆ ಪ್ರಾಧಿಕಾರ ಹೇಳಿದೆ ಆದರೆ ಅಷ್ಟು ಬಿಡಲು ಆಗಲ್ಲ ಅಂತಾ ಹೇಳಿದ್ದೇವೆ. ಹೀಗೆ ಮುಂದುವರೆದರೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡ್ತೇವೆ. ಈಗಾಗಲೇ ಸರ್ವಪಕ್ಷ ನಿಯೋಗ ಹೋಗೋ ಬಗ್ಗೆ ಸಿಎಂ ಮಾತಾಡಿದ್ದಾರೆ. ಪ್ರಧಾನಿ ಭೇಟಿ ಬಗ್ಗೆಯೂ ತೀರ್ಮಾನ ಮಾಡ್ತೀವಿ ಎಂದರು.