ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (H.D.Kumaraswamy) ಅವರಿಗೆ ಏಕಾಏಕಿ ಅನಾರೋಗ್ಯ (Illness) ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ತಡರಾತ್ರಿ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಎರಡು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ ಸದ್ಯ ಮನೆಯಲ್ಲೇ ಇದ್ದರು. ಮಂಗಳವಾರ ತಡರಾತ್ರಿ ಇವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಸತತ ಪ್ರವಾಸದ ಹಿನ್ನೆಲೆ ಜ್ವರ ಕಾಣಿಸಿಕೊಂಡಿದ್ದು, ಮಂಗಳವಾರ ತಡರಾತ್ರಿ ಬನ್ನೇರುಘಟ್ಟ ರಸ್ತೆಯ ಅಪೋಲೋ (Apollo) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಹಿಂದೆ ಕೂಡಾ ಚುನಾವಣಾ ಸಮಯದಲ್ಲಿ ನಿರಂತರ ಪ್ರಚಾರದಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಇದೀಗ ಎರಡೆರಡು ಬಾರಿ ವಿದೇಶ ಪ್ರವಾಸ ಮಾಡಿದ್ದು, ಸತತ ಪ್ರವಾಸದಿಂದ ಅನಾರೋಗ್ಯ ಕಾಣಿಸಿಕೊಂಡಿದೆ. ಇತ್ತೀಚಿಗಷ್ಟೇ ಕುಟುಂಬ ಸಮೇತ ಯೂರೋಪ್ ಪ್ರವಾಸ ಮುಗಿಸಿದ್ದ ಹೆಚ್‌ಡಿಕೆ ಆಗಸ್ಟ್ 7ರಂದು ವಿಶೇಷ ಆಹ್ವಾನದ ಮೇರೆಗೆ ಕಾಂಬೋಡಿಯಾ ಪ್ರವಾಸಕ್ಕೆ ಹೋಗಿದ್ದರು. ವಿದೇಶ ಪ್ರವಾಸದಿಂದ ಬಳಲಿದ ಕಾರಣ ಅನಾರೋಗ್ಯ ಉಂಟಾಗಿದೆ ಎನ್ನಲಾಗಿದೆ.