ಮೈಸೂರು: ಕಾಂಗ್ರೆಸ್‍ನ ಗ್ಯಾರಂಟಿ (Congress Guarantee) ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಇಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ. ಮೈಸೂರಿನ (Mysuru) ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಮನೆಯ ಮಹಾಲಕ್ಷ್ಮಿಯರ ಖಾತೆಗೆ 2000ರೂ. ಜಮೆಯಾಗಲಿದೆ.
1.11 ಕೋಟಿ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಮಹಿಳೆಯರ ಖಾತೆಗೆ ನೇರವಾಗಿ 2000 ರೂ. ತಲುಪಲಿದೆ. ಇಂದು ಯೋಜನೆ ಅಧಿಕೃತವಾಗಿ ಜಾರಿಯಾಗುತ್ತಿದ್ದು 5-6 ದಿನದಲ್ಲಿ ಎಲ್ಲಾ 1.11 ಕೋಟಿ ಫಲಾನುಭವಿಗಳ ಅಕೌಂಟ್‍ಗೆ (Account) ಹಣ ತಲುಪಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಗೃಹಲಕ್ಷ್ಮಿಯಿಂದ ಕುತೂಹಲ ಹೆಚ್ಚಾಗಿದೆ. ಇಂದು ಯೋಜನೆಗೆ ಚಾಲನೆ ನೀಡಲಿರುವ ಸರ್ಕಾರ ಎಲ್ಲಾ ಖಾತೆಗಳಿಗೆ ಏಕ ಕಾಲದಲ್ಲಿ ಹಣ ಹಾಕಲು ಮುಂದಾಗಿದೆ. ಸರ್ವಸ್ ಸಮಸ್ಯೆ, ತಾಂತ್ರಿಕ ಅಡೆತಡೆ ಏನಾದರೂ ಎದುರಾದರೆ ಇನ್ನೆರಡು ದಿನದಲ್ಲಿ ಎಲ್ಲ ಫಲಾನುಭವಿಗಳ ಅಕೌಂಟ್‍ಗೆ ಹಣ ತಲುಪಲಿದೆ ಎನ್ನಲಾಗಿದೆ. ಗೃಹ ಲಕ್ಷ್ಮಿಯರ ಪಾಲಿನ ಹಣ ಪ್ರತಿ ತಿಂಗಳಿನ 5 ಅಥವಾ 6ನೇ ದಿನಾಂಕದಂದು ಮಹಿಳೆಯರ ಅಕೌಂಟ್‍ಗೆ ಬರುವ ಸಾಧ್ಯತೆಯಿದೆ.
ಮೈಸೂರಿನಲ್ಲಿ ಬೃಹತ್ ವೇದಿಕೆಯ ಜೊತೆ ಒಂದು ಲಕ್ಷ ಕುರ್ಚಿ, ಬೃಹತ್ ಎಲ್‍ಇಡಿ ವೇದಿಕೆ ಹಾಕಲಾಗಿದೆ. ವೇದಿಕೆ ಕಾರ್ಯಕ್ರಮ ಮುಂಭಾಗ ಅರಮನೆ ಮಾದರಿಯ ಮುಖ್ಯ ದ್ವಾರ ನಿರ್ಮಿಸಲಾಗಿದೆ. ಕಾಂಗ್ರೆಸ್‍ನ ಐದು ಗ್ಯಾರಂಟಿಗಳು ಕರ್ನಾಟಕ ಮಾಡೆಲ್. ಈ ಮಾಡೆಲ್ ಈಗ ದೇಶದ ಎಲ್ಲಾ ಕಡೆಯೂ ಸುದ್ದಿಯಲ್ಲಿದೆ. ಬಹಳ ಬದ್ಧತೆಯಿಂದ ಈ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದೇವೆ. ಏಕಕಾಲಕ್ಕೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದ್ದಾರೆ.