ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಹಗುರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ನೈರುತ್ಯ ಮಾನ್ಸೂನ್ ರಾಜ್ಯದಲ್ಲಿ ದುರ್ಬಲವಾಗಿದ್ದರೂ, ಅದರ ಪರಿಣಾಮವಾಗಿ ಕೆಲವು ಕಡೆ ಮಳೆಯಾಗಿದೆ. ಕರಾವಳಿಯಲ್ಲಿ ಮಳೆಯು ತೀವ್ರವಾಗಿ ತಗ್ಗಿದೆ. ಆದರೆ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಮಾರುತಗಳು ಸಾಮಾನ್ಯ ಸ್ಥಿತಿಯಲ್ಲಿವೆ. ಹಾಗಾಗಿ, ಮುಂದಿನ ಎರಡು ದಿನಗಳಲ್ಲಿ ಮಳೆ ಬೀಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಸೇರಿ ಹಾಗೂ ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 25 ಡಿಗ್ರಿ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಮಳೆಗಾಲದಲ್ಲೂ ಸೆಖೆ ಉಂಟಾಗುತ್ತಿರುವುದರಿಂದ ರೋಸಿ ಹೋಗಿರುವ ಜನತೆ, ಬೇಸಗೆಯಂಥ ವಾತಾವರಣ ಇರುವುದರಿಂದ ಬೇಗನೇ ಮಳೆಯು ಬಂದು ಈಗಾಗುತ್ತಿರುವ ಬಿಸಿಲಿನ ಬೇಗೆಯಿಂದ ಪಾರಾದರೆ ಸಾಕು ಎಂಬಂತಾಗಿದೆ. ಕೆಲವರಂತೂ ಮಳಗಾಲದೇ ಇಷ್ಟು ಸೆಖೆಯಿದ್ದು ಬೇಸಗೆ ಇನ್ನು ಹೇಗಿರುತ್ತೋ ಎಂಬ ದಿಗಿಲಿಗೆ ಒಳಗಾಗಿದ್ದಾರೆ. ಅದರಿಂದಾಗಿ, ಬೆಂಗಳೂರು ನಗರದಲ್ಲಿ ಒಂದಿಷ್ಟು ಮಳೆಯಾಗಲಿ ಎಂದು ಬೆಂಗಳೂರಿಗರು ಹಾರೈಸುತ್ತಿದ್ದಾರೆ.