ಒಂದೇ ವೇದಿಕೆಯಲ್ಲಿ ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಇಬ್ಬರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಶೀಘ್ರದಲ್ಲೇ ಇಬ್ಬರು ಮತ್ತೆ ಒಂದಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂಬ ಚರ್ಚೆಗಳು ಸಹ ಆರಂಭವಾಗಿದೆ.
ಇಂದು ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಿನ್ನೆ ಚಿತ್ರರಂಗದವರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಸುದೀಪ್ಗೂ ಸಹ ಆಹ್ವಾನವನ್ನು ನೀಡಲಾಗಿತ್ತು. ದರ್ಶನ್ ಸಹ ಪಾರ್ಟಿಗೆ ಆಗಮಿಸಿದ್ದರು. ಅನೇಕ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಮತ್ತು ಸುದೀಪ್ ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಯಾವುದೇ ಕಾರ್ಯಕ್ರಮದಲ್ಲೂ ಅಥವಾ ಮದುವೆ, ಸಮಾರಂಭಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಅಂಬರೀಷ್ ನಿಧನರಾದಾಗಲೂ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ, ಅಭಿಷೇಕ್ ಅಂಬರೀಷ್ ಮದುವೆ ಸಂದರ್ಭದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಯಾವುದೇ ಕಾರ್ಯಾಕ್ರಮಗಳಲ್ಲೂ ಸುದೀಪ್ ಬಂದು ಹೋದ ಬಳಿಕ ದರ್ಶನ್ ಅಥವಾ ದರ್ಶನ್ ಬಂದು ಹೋದ ಬಳಿಕ ಸುದೀಪ್ ಬರುತ್ತಿದ್ದರು. ಇಬ್ಬರ ನಡೆಯಿಂದ ಅಭಿಮಾನಿಗಳಿಗೆ ಬೇಸರವಾಗುತ್ತಿತ್ತು. ಇಬ್ಬರು ಮತ್ತೆ ಒಂದಾಗಬೇಕು ಅಂತಾ ಆಗಾಗ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಸಹ ನಡೆಸಿದ್ದಾರೆ.
ಇದರ ನಡುವೆ ಕ್ರಾಂತಿ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆತ ಪ್ರಕರಣದ ವೇಳೆ ಸುದೀಪ್ ಪ್ರತಿಕ್ರಿಯೆ ನೀಡಿದ್ದರು. ಘಟನೆಯನ್ನು ಖಂಡಿಸಿದ್ದರು. ಇದಕ್ಕೆ ದರ್ಶನ್ ಸಹ ಧನ್ಯವಾದ ತಿಳಿಸಿದ್ದರು. ಇದು ಕೂಡ ಇಬ್ಬರ ನಡುವೆ ಮನಸ್ತಾಪ ಕರಗಿದೆ ಎಂಬುದರ ಸೂಚನೆ ನೀಡಿತು. ಆಗಲೂ ಅಭಿಮಾನಿಗಳು ತುಂಬಾ ಖುಷಿಯಾಗಿದ್ದರು. ಅಂದಿನಿಂದಲೂ ಅಭಿಮಾನಿಗಳಲ್ಲಿ ಇಬ್ಬರು ಮತ್ತೆ ಒಂದಾಗುವ ಆಶಾ ಭಾವನೆ ಇದೆ.