ಬೆಂಗಳೂರು: ಗಂಡ-ಹೆಂಡತಿ ಸಂಬಂಧ ಅನ್ನೋದು ಪವಿತ್ರವಾದದ್ದು, ಯಾರೇ ತಪ್ಪು ಮಾಡಿದ್ರೂ ಅದನ್ನು ಸರಿದೂಗಿಸಿಕೊಂಡು ಹೋಗೋದೇ ಸಂಸಾರ. ಆದ್ರೆ ಇಲ್ಲೊಬ್ಬ ಮಹಿಳೆ ಮಾಡಿರೋ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ..? ಗಂಡನಿಗೆ ಬುದ್ಧಿ ಕಲಿಸಲು ಹೋಗಿ ತನ್ನ ಚಿನ್ನವನ್ನೇ (Gold) ಸ್ನೇಹಿತರಿಂದ ಕಳವು (Theft) ಮಾಡಿಸಿ ನಾಟಕ ಮಾಡಿದ ಮಹಿಳೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ (Bengaluru) ಮಲ್ಲೇಶ್ವರಂನಲ್ಲಿ (Malleshwaram) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿನ್ನ ಕಳವು ಮಾಡಿದ್ದ ಮಹಿಳೆಯ ಸ್ನೇಹಿತರಾದ ಧನರಾಜ್ ಹಾಗೂ ರಾಕೇಶ್ ಬಂಧಿತ ಆರೋಪಿಗಳು. ಮಹಿಳೆಗೆ ತನ್ನ ಪತಿಯೊಂದಿಗೆ ಕಲಹವಿತ್ತು. ಈ ಹಿನ್ನೆಲೆ ಗಂಡನಿಗೆ ಬುದ್ಧಿ ಕಲಿಸಲು ಮಹಿಳೆ ಪ್ಲಾನ್ ಮಾಡಿದ್ದಳು.
ಗಂಡ ಹಾಗೂ ತನಗೂ ಸೇದಿದ್ದ 109 ಗ್ರಾಂ ಚಿನ್ನವನ್ನು ಮಹಿಳೆ ಬ್ಯಾಂಕ್ನಿಂದ ಬಿಡಿಸಿಕೊಂಡು ಬಂದಿದ್ದಳು. ಅದನ್ನು ಸ್ಕೂಟಿಯ ಡಿಕ್ಕಿಯಲ್ಲಿರಿಸಿ ತನ್ನ ಸ್ನೇಹಿತ ಧನರಾಜ್ಗೆ ಕರೆ ಮಾಡಿದ್ದಳು. ಅದರಂತೆ ಧನರಾಜ್ ಅಲ್ಲಿಗೆ ಬಂದು ಚಿನ್ನವನ್ನು ಕಳವು ಮಾಡಿ ಎಸ್ಕೇಪ್ ಆಗಿದ್ದ. ಬಳಿಕ ಯಾರೋ ಅಪರಿಚಿತರು ಚಿನ್ನ ಕಳವು ಮಾಡಿದ್ದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರ ತನಿಖೆಯಲ್ಲಿ ಮಹಿಳೆ ಚಿನ್ನವನ್ನು ತಾನೇ ತೆಗೆದುಕೊಂಡು ಸ್ನೇಹಿತರಿಂದ ಕಳವು ಮಾಡಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.