ಇಡೀ ದೇಶವೇ ನಿರೀಕ್ಷೆ ಹೊಂದಿದ್ದ ಚಂದ್ರಯಾನ 3 ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ ಶ್ರಮಿಸಿದ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳು ಹಾಗೂ ಸಿಬ್ಬಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
“ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಕಾಲಿಟ್ಟಿದೆ. ಆ ಮೂಲಕ ಚಂದ್ರಗ್ರಹದ ಮೇಲೆ ಭಾರತದ ಹೆಗ್ಗುರುತು ಮೂಡಿದೆ. ಇದಕ್ಕಾಗಿ ಅವಿರತ ಶ್ರಮಿಸಿದ ಇಸ್ರೋ ಸಂಸ್ಥೆಗೆ ಶುಭಾಶಯಗಳು.
ಇಸ್ರೋ ಸಂಸ್ಥೆ ಈವರೆಗೂ ಮೂರು ಚಂದ್ರಯಾನ ಯೋಜನೆ ಯಶಸ್ವಿಗೊಳಿಸಿರುವುದು ದೊಡ್ಡ ಸಾಧನೆಯೇ ಸರಿ.
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿರುವುದು ಇಡೀ ದೇಶವೇ ಹೆಮ್ಮೆಪಡುವ ವಿಚಾರ. ಈ ಯೋಜನೆ ಯಶಸ್ಸಿನ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ಶಿವಕುಮಾರ್ ಅವರು ಕೊಂಡಾಡಿದ್ದಾರೆ.
1960ರ ದಶಕದಲ್ಲೇ ದೇಶದ ರಾಕೆಟ್ ಮ್ಯಾನ್ ವಿಕ್ರಂ ಸಾರಾಭಾಯಿ, ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ದೂರದೃಷ್ಟಿ ಇಸ್ರೋ ಸಂಸ್ಥೆಗೆ ಬುನಾದಿ ಹಾಕಿತ್ತು. ಅಂದು ಅವರು ಬಿತ್ತಿದ ಬೀಜ ಇದು ವಿಶ್ವದಲ್ಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದೆ” ಎಂದು ಶಿವಕುಮಾರ್ ಅವರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.