ಬೆಂಗಳೂರು: ಕೋಟ್ಯಂತರ ಜನ ಹರಕೆ, ಪೂಜೆ ಈಡೇರಿದಂತಿದೆ. ಇಸ್ರೋ ವಿಜ್ಞಾನಿಗಳ ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 (Chandrayaan-3) ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಇದೀಗ ವಿಕ್ರಮ್ ಲ್ಯಾಂಡ್ ಆದ ಬಳಿಕದ ಮೊದಲ ಫೋಟೋವನ್ನು ಇಸ್ರೋ ರಿಲೀಸ್ ಮಾಡಿದೆ.
ಇದಕ್ಕೂ ಮುನ್ನ ವಿಕ್ರಮ್ ಲ್ಯಾಂಡಿಂಗ್ ಆಗುತ್ತಿರುವಾಗ ಕಳುಹಿಸಿದ 4 ಫೋಟೋಗಳನ್ನು ಇಸ್ರೋ ರಿಲೀಸ್ ಮಾಡಿತ್ತು. ಇಸ್ರೋ ಲ್ಯಾಂಡರ್ (Vikram Lander) ಜೊತೆ ಸಂಪರ್ಕ ಸಂವಹನ ಸಾಧಿಸಿದೆ. ಬೆಂಗಳೂರಿನ ಪೀಣ್ಯ ಬಾಹ್ಯಾಕಾಶ ನೌಕೆ ನಿಯಂತ್ರಣ ಕೇಂದ್ರದಿಂದ ಸಂವಹನ ಯಶಸ್ವಿಯಾಗಿದೆ. ಈ ಮೂಲಕ ಲಂಬವಾಗಿ ಲ್ಯಾಂಡಿಂಗ್ ಆಗುವ ವೇಳೆ ವಿಕ್ರಮ್ ಲ್ಯಾಂಡರ್ ನಾಲ್ಕು ಚಿತ್ರಗಳನ್ನು ಸೆರೆಹಿಡಿದು ಕಳುಹಿಸಿದೆ. ಈ ಮೂಲಕ ಲ್ಯಾಂಡರ್ ಜೊತೆಗೆ ಇಸ್ರೋ ಸಂವಹನ ಆರಂಭಗೊಳಿಸಿದೆ ಎಂದು ಇಸ್ರೋ ತಿಳಿಸಿತ್ತು.
ಇಸ್ರೋ (ISRO) ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಸಾಧಾರಣ ಸಾಧನೆಯಲ್ಲ. ಚಂದ್ರನ ಮೇಲೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇರಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ನಾಲ್ಕು ದೇಶಗಳ ಸಾಲಿಗೆ ಭಾರತವೂ ಸೇರಿದೆ.