ಲಂಗು-ಲಗಾಮಿಲ್ಲದೆ ಆರಾಮಾಗಿ ತಮಿಳುನಾಡಿಗೆ ಬಿಡ್ತಿದ್ದಾರೆ: ವಾಟಾಳ್ ನಾಗರಾಜ್

ಬೆಂಗಳೂರು ;- ಕಾವೇರಿ ನೀರನ್ನು ಯಾವ ಅಡ್ಡಿ-ಆತಂಕ, ಲಂಗು-ಲಗಾಮಿಲ್ಲದೆ ಆರಾಮಾಗಿ ತಮಿಳುನಾಡಿಗೆ ಬಿಡ್ತಿದ್ದಾರೆ ಎಂದು ರೈತಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ಕಾವೇರಿ ನೀರನ್ನು ಯಾವ ಅಡ್ಡಿ-ಆತಂಕ, ಲಂಗು-ಲಗಾಮಿಲ್ಲದೆ ಆರಾಮಾಗಿ ತಮಿಳುನಾಡಿಗೆ ಬಿಡ್ತಿದ್ದಾರೆ. ಇಡೀ ಜೀವನದುದ್ದಕ್ಕೂ ನೆಲ, ಜಲಕ್ಕಾಗಿ ಪ್ರಾಣವನ್ನೇ ಅರ್ಪಣೆ ಮಾಡಿದ್ದೀವಿ. ಆ ನೋವು ನಮಗೆ ಗೊತ್ತು. ರಾಜ್ಯದ ರೈತರ ನೋವು, ಪರಿಸ್ಥಿತಿ ನಮಗೆ ಗೊತ್ತು. ಯಾಕೆ ಸುಪ್ರಿಂ ಕೋರ್ಟ್ಗೆ ಹೋದ್ರಿ, ನಾವು ನೀರು ಬಿಡ್ತೀವಿ ಎಂದು ಸರ್ಕಾರ ಹೇಳಿದೆ. ಈ ರೀತಿ ಯಾವ ಸರ್ಕಾರಗಳೂ ಮಾತನಾಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರು ಸಿಎಂ ಆಗಿದ್ದಾಗಲು ತಮಿಳುನಾಡಿಗೆ ನೀರು ಬಿಡಬೇಕಾದರೆ ಹರಸಾಹಸಪಟ್ಟಿದ್ದರು. ರೈತ ಮುಖಂಡರ ಸಭೆ ಕರೆದು, ತಮಿಳುನಾಡಿಗೆ ನೀರು ಬಿಟ್ಟರೆ ನಮ್ಮ ಪರಿಸ್ಥಿತಿ ಏನು, ನೀರು ಬಿಡದೇ ಇದ್ದರೆ ಏನಾಗುತ್ತೆ ಎಂದು ಅಭಿಪ್ರಾಯ ಕೇಳಿದ್ದರು. ಆದರೆ ಕೊನೆಗೆ ತಮಿಳುನಾಡಿಗೆ ನೀರು ಬಿಟ್ಟರು. ಆದರೆ ನಾನು ಕರ್ನಾಟಕ ಬಂದ್ ಮಾಡಿ ದೇವೇಗೌಡರ ನಿಲುವನ್ನು ಸ್ಪಷ್ಟವಾಗಿ ವಿರೋಧಿಸಿದ್ದೆ. ನಿಜವಾಗಲೂ ನಮ್ಮ ರೈತರು ತುಂಬಾ ನೋವಲ್ಲಿದ್ದಾರೆ. ರೈತರ ಬೆಳೆಗಳಿಗೆ ನೀರಿಲ್ಲ, ಕುಡಿಯಲು ನೀರಿಲ್ಲ. ಕಬ್ಬಿನ ಗದ್ದೆಗಳು ಒಣಗುತ್ತಿವೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದವರ ಬಳಿ ಕೀ ಇದೆ ಎಂಬ ಮಾತು ಬೇಡ. ಕಾವೇರಿ ಕಬಿನಿ, ಹಾರಂಗಿ, ಹೇಮಾವತಿ ನಮ್ಮ ಜಲಾಶಯಗಳು. ನಾವು ಜಲಾಶಯ ಕಟ್ಟಿರೋದು ನಮಗಾಗಿ. ತಮಿಳುನಾಡಿಗೆ ನೀರು ಬಿಡೋಕಲ್ಲ. ತಮಿಳುನಾಡಲ್ಲಿ ಭಾರಿ ರಾಜಕೀಯ ಮಾಡ್ತಿದ್ದಾರೆ. ಒಂದು ಸಾರಿಯೂ ಅವರು ಪ್ರೀತಿಯಿಂದ ನಡೆದುಕೊಳ್ಳಲಿಲ್ಲ. ಸುಪ್ರಿಂ ಕೋರ್ಟ್ಗೆ ಅರ್ಜಿ ಹಾಕ್ತೀವಿ ಅಂತ ಹೆದರಿಸುತ್ತಾರೆ, ಬೆದರಿಕೆ ಹಾಕ್ತಾರೆ. ನಾಡಿನ ಜನತೆಗೆ ಮೇಕೆದಾಟು ಬಗ್ಗೆ ಡಿಕೆಶಿ ಹೇಳಬೇಕು. ನಿಮಗೆ ನಿಶಾನೆ ಸಿಕ್ಕಿದ್ಯಾ?. ಎಷ್ಟು ಹಣ ಇಟ್ಟಿದ್ದೀರಾ?. ಮೇಕೆದಾಟು ಬಗ್ಗೆ ಸ್ಪಷ್ಟ ನಿಲುವು ಹೇಳಿ ಎಂದು ಒತ್ತಾಯಿಸಿದರು.

Loading

Leave a Reply

Your email address will not be published. Required fields are marked *