ಮಂಡ್ಯ :- ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನದಿನಕ್ಕೂ ದರೋಡೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ವಾಹನ ಸವಾರರು ರಾತ್ರಿ ವೇಳೆ ಆತಂಕದಿಂದಲೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.ಮೈಸೂರಿನಿಂದ ಮದ್ದೂರಿಗೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ 5 ಮಂದಿ ದರೋಡೆಕೋರರ ಗುಂಪೊಂದು ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ವಾಹನ ಚಾಲಕ ಪಾರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮದ್ದೂರು ಪಟ್ಟಣದ ಮಹಾವೀರ ಚಿತ್ರಮಂದಿರದ ಬಳಿ ಇರುವ ನಿಡಘಟ್ಟ ಗ್ರಾಮದ ಪ್ರಸನ್ನ ಅವರ ತರಕಾರಿ ಮಂಡಿಗೆ ಚಂದ್ರು ಮತ್ತು ದಯಾನಂದ್ ಅವರುಗಳು ಮಂಗಳವಾರ ತಡರಾತ್ರಿ 1.15 ರ ಸಮಯದಲ್ಲಿ ಮೈಸೂರಿನ ಎಪಿಎಂಸಿ ಮಾರುಕಟ್ಟೆಯಿಂದ ( KA 11 B 4158 ) ಟಾಟಾ ಏಸ್ ವಾಹನದಲ್ಲಿ ತರಕಾರಿ ತುಂಬಿಕೊಂಡು ಮದ್ದೂರು ಕಡೆಗೆ ಹೊರಟಿದ್ದಾರೆ.
ಮಂಡ್ಯ ನಗರದ ಇಂಡುವಾಳು ಸಮೀಪದ ಬೈಪಾಸ್ ರಸ್ತೆಗೆ ( ರೈಲ್ವೆ ಸೇತುವೆ ಹತ್ತುವ ವೇಳೆ ) ತೆರಳುತ್ತಿದ್ದಂತೆ ರಸ್ತೆ ವಿಭಜಕದಲ್ಲಿ ಇರುವ ಗಿಡಗಳ ಮಧ್ಯೆ ಕುಳಿತಿದ್ದ 5 ಮಂದಿ ದರೋಡೆಕೋರರ ಗುಂಪೊಂದು ವಿವಿಧ ಮಾರಕಾಸ್ತ್ರಗಳೊಂದಿಗೆ ಏಕಾಏಕಿ ಕಲ್ಲುಗಳಿಂದ ಟಾಟಾ ಏಸ್ ವಾಹನದ ಮುಂಭಾಗದ ಗಾಜು ಹಾಗೂ ವಿವಿಧ ಕಡೆಗೆ ಎಸೆದಿದ್ದಾರೆ. ಆದರೆ, ವಾಹನ ಚಾಲಕ ಚಂದ್ರು ವಾಹನ ನಿಲ್ಲಿಸದೆ ಮತ್ತಷ್ಟು ವೇಗವಾಗಿ ವಾಹನ ಚಲಾಯಿಸಿಕೊಂಡು ತೆರಳಿದ ಪರಿಣಾಮ ದರೋಡೆಕೋರರ ದಾಳಿ ಯತ್ನ ವಿಫಲವಾಗಿದೆ.
ಇನ್ನು ಕೆಲ ತಿಂಗಳುಗಳಲ್ಲೆ ಸಾಕಷ್ಟು ದರೋಡೆ ಪ್ರಕರಣಗಳು ನಡೆಯುತ್ತಲೆ ಇವೆ. ದರೋಡೆಕೋರರ ಹೆಡೆಮುರಿ ಕಟ್ಟಲು ರಾಮನಗರ ಮತ್ತು ಮಂಡ್ಯ ಎರಡು ಜಿಲ್ಲೆಗಳ ಖಾಕಿ ಪಡೆ ಸಾಕಷ್ಟು ಪ್ರಯತ್ನ ಪಡುತ್ತಿದ್ದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಪದೇ ಪದೇ ಇದೇ ರೀತಿ ಘಟನೆಗಳು ಸಂಭವಿಸುತ್ತಿರುವುದು ಸುರಕ್ಷತೆಯ ಬಗ್ಗೆಯೂ ಆತಂಕ ಮೂಡುವಂತೆ ಮಾಡಿದೆ. ವಾಹನ ಸವಾರರು ಒಬ್ಬೊಬ್ಬರೇ ಪ್ರಯಾಣ ಮಾಡುವುದು ಸರಿಯಾದ ಕ್ರಮವಲ್ಲ ಹಾಗೂ ಯಾವುದೇ ಕಾರಣಕ್ಕೂ ರಾತ್ರಿ ವೇಳೆ ವಾಹನ ನಿಲ್ಲಿಸಬೇಡಿ ಎಂದು ಚಾಲಕ ಪ್ರಸನ್ನ ಮನವಿ ಮಾಡಿದ್ದಾರೆ.