ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3ರ (Chandrayaan-3) ಲ್ಯಾಂಡರ್ ವಿಕ್ರಮ್ (Vikram Lander) ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದೆ. ಗುರುವಾರ ಮಧ್ಯಾಹ್ನ 1:15 ಗಂಟೆಗೆ ಪ್ರೊಪಲ್ಷನ್ (Propulsion) ಮಾಡ್ಯೂಲ್ನಿಂದ ಲ್ಯಾಂಡರ್ ಮ್ಯಾಡ್ಯೂಲ್ ಬೇರ್ಪಟ್ಟಿದ್ದು, ಆಗಸ್ಟ್ 23ರಂದು ಚಂದ್ರನ (Moon) ಮೇಲೆ ಇಳಿಯಲು ಸಜ್ಜಾಗಿದೆ ಇಸ್ರೋ ತಿಳಿಸಿದೆ.
ಈ ಮಾಹಿತಿಯನ್ನು ಟ್ವಿಟ್ಟರ್ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿರುವ ಇಸ್ರೋ, ಲ್ಯಾಂಡರ್ ಮ್ಯಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್ ನಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ನಾಳೆಗೆ ಯೋಜಿಸಲಾದ 1,600 ಗಂಟೆಗಳ ಡಿಬೂಸ್ಟಿಂಗ್ ನಂತರ ಚಂದ್ರನ ಮೇಲೆ ಲ್ಯಾಂಡರ್ ಇಳಿಯಲಿದೆ. ಪ್ರೊಪಲ್ಷನ್ ಮಾಡ್ಯೂಲ್ ತಿಂಗಳುಗಳ ಕಾಲ ಅಥವಾ ವರ್ಷಗಳ ವರೆಗೆ ಪ್ರಸ್ತುತ ಕಕ್ಷೆಯಲ್ಲೇ ತನ್ನ ಪ್ರಯಾಣ ಮುಂದುವರಿಸಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.
‘ಚಂದ್ರಯಾನ-3’ ನೌಕೆಯು ಬುಧವಾರ ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿತ್ತು. ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುವ ಮುನ್ನ ಉಡಾವಣಾ (ಪ್ರೊಪಲ್ಷನ್ ಮಾಡ್ಯೂಲ್) ವಾಹನದಲ್ಲಿರುವ ಲ್ಯಾಂಡರ್ ಮಾಡ್ಯೂಲ್ ‘ವಿಕ್ರಮ್’ ಅನ್ನು ಪ್ರತ್ಯೇಕಗೊಳಿಸುವ ಕಾರ್ಯ ಗುರುವಾರ ನಡೆಯಲಿದೆ ಎಂದು ಹೇಳಿತ್ತು. ಇದೀಗ ʻವಿಕ್ರಮ್ʼ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಚಂದ್ರಯನ ಮೇಲೆ ನೌಕೆ ಇಳಿಯುವ ಕನಸು ನನಸಾಗಲು ದಿನಗಣನೆ ಆರಂಭವಾಗಿದೆ.